×
Ad

ರಾಜ್ಯೋತ್ಸವ ಪ್ರಶಸ್ತಿಗೆ ಮುಂದಿನ ವರ್ಷದಿಂದ ಅರ್ಜಿ ಆಹ್ವಾನವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Update: 2021-11-01 21:22 IST

ಬೆಂಗಳೂರು, ನ.1: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗಾಗಿ ಅರ್ಜಿಯನ್ನು ಆಹ್ವಾನಿಸುವುದಿಲ್ಲ. ಅದರ ಬದಲಾಗಿ, ಸರಕಾರ ಮತ್ತು ಆಯ್ಕೆ ಸಮಿತಿಯ ಶೋಧನೆ ಮೂಲಕವೇ ಹಿರಿಯರು-ಕಿರಿಯರೆನ್ನದೆ ಸಾಧನೆ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಪ್ರಶಸ್ತಿ ಜತೆಗೆ 1 ಲಕ್ಷ ರೂ.ಗೌರವಧನ ನೀಡಲಾಗುತ್ತಿದೆ. ಆದರೆ, ಮುಂದಿನ ವರ್ಷದಿಂದ ಪ್ರಶಸ್ತಿ ಜತೆಗೆ 5 ಲಕ್ಷ ರೂ.ಗೌರವಧನವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ನಿಯಮಾವಳಿ ಅನುಸಾರ ಆಯ್ಕೆ ಸಮಿತಿಯು ಅರ್ಜಿ ಆಹ್ವಾನದ ಮೂಲಕ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಈ ನಿಯಮಾವಳಿಗೆ ತಿದ್ದುಪಡಿ ತಂದು ಹಿರಿಯರು, ಕಿರಿಯರು ಎಲ್ಲರಿಗೂ ಸಾಧನೆ ಆಧಾರದ ಮೇಲೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. 

ಮುಂದಿನ ಬಾರಿ ಎರಡು ತಿಂಗಳ ಮೊದಲೇ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ, ಕನ್ನಡಿಗರು ಸಾಧನೆ ಮಾಡಿದರೆ ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮಿಂದ ಆಗಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್, ಕಂದಾಯ ಸಚಿವ ಆರ್.ಅಶೋಕ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್, ವಿಧಾನ ಪರಿಷತ್ ಸದಸ್ಯ ರಮೇಶ್‍ಗೌಡ, ಶಾಸಕ ಉದಯ ಗರುಡಾಚಾರ್, ಸಂಸದರಾದ ಉಮೇಶ ಜಾಧವ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News