×
Ad

ವೇದಿಕೆಯಲ್ಲೇ ಜೆಡಿಎಸ್ ನ ಇಬ್ಬರು ನಾಯಕರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ ಸಿದ್ದರಾಮಯ್ಯ

Update: 2021-11-01 21:43 IST

ತುಮಕೂರು: ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಳು ಜಯಕಾರ ಹಾಕಿದ್ದಾರೆ. 

ಗುಬ್ಬಿಯಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಆಸ್ಪತ್ರೆಯ ಸಮಾರಂಭದಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜ್ ಭಾಗಿವಹಿಸಿದ್ದ ವೇದಿಕೆಯಲ್ಲೇ ಸಿದ್ದರಾಮಯ್ಯ ಜೆಡಿಎಸ್ ನ ಇಬ್ಬರೂ ನಾಯಕರಿಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದರು.

ಮೈಸೂರು ಗ್ರಾಮೀಣ ಸೊಗಡಿನ ತಮ್ಮದೇ ಶೈಲಿಯಲ್ಲಿ ಭಾಷಣ ಮಾಡಿ ಸಭಿಕರನ್ನು ನಗೆಗಡಲಲ್ಲಿ ಮುಳುಗುವಂತೆ ಮಾಡಿದರು. ನಾಲ್ಕು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಕೆಲಸ ಮಾಡಿದ ಶ್ರೀನಿವಾಸ್ ಅವರನ್ನು ಅವರದೇ ಕ್ಷೇತ್ರದಲ್ಲಿ ನಡೆದ ಸಭೆಗೆ ಕರೆಯದೆ ಸಮಾವೇಶ ಮಾಡಿದಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಇವರನ್ನು ಏನನ್ನಬೇಕು ಎಂದು ಪ್ರೇಕ್ಷಕರನ್ನು ಕೇಳಿದರು.

“ಏನಾದ್ರು ಮಾತನಾಡಿದ್ರೆ ಆ ಕುಮಾರಸ್ವಾಮಿ ಜಾತಿ ಬಣ್ಣ ಕಟ್ತಾರೆ. ರಾಜಕಾರಣದಲ್ಲಿ ನನಗೆ ಯಾವುದೇ ಜಾತಿ ಇಲ್ಲ. ನಾನು ಮನುಷ್ಯ. ಎಲ್ಲರನ್ನೂ ಪ್ರೀತಿಸುತ್ತೇನೆ. ಹಿಂದೆಯೇ ವಾಸು ಅವರನ್ನು ಪಕ್ಷಕ್ಕೆ ಬರ್ತೀಯೇನಯ್ಯ ಅಂತ ಕರೆದೆ. ಇಲ್ಲಣ್ಣ ಬರೋಲ್ಲ ಅಂದ. ಈಗ್ಲಾದ್ರೂ ಬರ್ತೀಯೇನಯ್ಯಾ ಎಂದು ಪ್ರಶ್ನಿಸುತ್ತಿದ್ದಂತೆಯೇ ಜನರು ಕೇಕೆ ಹಾಕಿ ನಕ್ಕು ಸಂಭ್ರಮಿಸಿದರು.

ಇರಲಿ, ಕಾಂಗ್ರೆಸ್ ಪಕ್ಷ ಬರುಲು ತೀರ್ಮಾನ ತೆಗೆದುಕೊಳ್ಳುವುದನ್ನು ಅವರಿಗೇ ಬಿಡೋಣ. ಮೊದಲು ಸ್ಥಳೀಯ ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಿ. ಆದರೆ ಕಾಂಗ್ರೆಸ್ ಪಕ್ಷಕ್ಕೆ ವಾಸು ಅವರನ್ನು ಆಹ್ವಾನಿಸುತ್ತೇನೆ. ಕಾಂತರಾಜು ಈಗಾಗಲೇ ಪಕ್ಷಕ್ಕೆ ಬರಲು ತೀರ್ಮಾನ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸಲೇಬೇಕು. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News