ತ್ರಿಭಾಷಾ ಸೂತ್ರಕ್ಕೆ ಶಾಸಕ ರಿಝ್ವಾನ್ ಅರ್ಶದ್ ಆಕ್ಷೇಪ
ಬೆಂಗಳೂರು, ನ. 1: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸರಕಾರ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಕನ್ನಡಿಗರ ಮೇಲೆ ಅನ್ಯ ಭಾಷೆಗಳನ್ನು ಹೇರುವುದು ಸರಿಯಲ್ಲ ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್, ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಆಕ್ಷೇಪಿಸಿದ್ದಾರೆ.
ಸೋಮವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದಕ್ಕೆ ತಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ಸರಕಾರ ಬಲವಂತವಾಗಿ ಕನ್ನಡಿಗರ ಮೇಲೆ ಸವಾರಿ ಮಾಡುವುದು ಬೇಡ. ನಮ್ಮ ಭಾಷೆ ನಮ್ಮ ಹೆಮ್ಮೆ ಎಂದು ನುಡಿದರು.
ದೇಶದ ಶೇ.34ರಷ್ಟು ಜನರು ಮಾತ್ರ ಹಿಂದಿಯನ್ನು ಮಾತೃಭಾಷೆಯಾಗಿ ಸ್ವೀಕರಿಸಿದ್ದಾರೆ. ಉಳಿದ ಶೇ.66ರಷ್ಟು ಜನರ ಮೇಲೆ ಹಿಂದಿ ಭಾಷೆ ಹೇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ. ಸರಕಾರ ಇದಕ್ಕೆ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಬೇಕು. ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದನ್ನು ಒಪ್ಪಬಹುದು. ಆದರೆ, ಹಿಂದಿ ಹೇರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಿಝ್ವಾನ್ ಅರ್ಶದ್ ಎಚ್ಚರಿಸಿದರು.
ಕರ್ನಾಟಕ ರಾಜ್ಯದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಯಾರೂ ಮರೆಯಬಾರದು. ಕನ್ನಡ ಭಾಷೆ ಕಡ್ಡಾಯ ಪ್ರಶ್ನಿಸಿ ಕೆಲವರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲೂ ರಾಜ್ಯ ಸರಕಾರ ಗಟ್ಟಿಯಾದ ನಿಲುವು ಪ್ರಕಟಿಸುವ ಅಗತ್ಯವಿಲ್ಲ. ಜೊತೆಗೆ ಕನ್ನಡ ನಾಡು-ನುಡಿಯ ಉಳಿವಿಗೆ ಸರಕಾರ ಕಟಿಬದ್ಧವಾಗಬೇಕು ಎಂದು ಅವರು ಸಲಹೆ ನೀಡಿದರು.