ಉಪ ಚುನಾವಣೆ: ಹಾನಗಲ್ ನಲ್ಲಿ ಕಾಂಗ್ರೆಸ್ ಜಯಭೇರಿ
ಹಾವೇರಿ, ನ.2: ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ. ಮಾನೆ ಗೆಲುವಿನೊಂದಿಗೆ ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಆ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಸೋಲು ಕಂಡಿದ್ದಾರೆ. ಮಾನೆ ಗೆಲುವಿನ ಬಗ್ಗೆ ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು 1,71,726 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 87,490(ಶೇ.50.95) ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ 80,117(ಶೇ.46.65) ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಶ್ರೀನಿವಾಸ್ ಮಾನೆ, ಶಿವರಾಜ್ ಸಜ್ಜನರ್ ಅವರನ್ನು 7373 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಯಾಝ್ ಶೇಕ್ ಕೇವಲ 927 ಮತಗಳನ್ನಷ್ಟೇ ಪಡೆದಿದ್ದಾರೆ.ಮತ ಎಣಿಕೆಯ ಆರಂಭದ ಸುತ್ತಿನಿಂದಲೂ ಅಲ್ಪ ಮುನ್ನಡೆಯೊಂದಿಗೆ ಮುಂದುವರಿದ ಶ್ರೀನಿವಾಸ ಮಾನೆ 2ನೇ ಸುತ್ತಿನಲ್ಲಿ ಮಾತ್ರ ಒಮ್ಮೆ ಶಿವರಾಜ ಸಜ್ಜನರ ಅವರಿಗೆ ಮುನ್ನಡೆ ಬಿಟ್ಟುಕೊಟ್ಟಿದ್ದರು. 6ನೇ ಸುತ್ತಿನ ಎಣಿಕೆಯ ವೇಳೆ ತಮ್ಮ ಮುನ್ನಡೆಯನ್ನು ಮೂರಂಕಿಯಿಂದ ನಾಲ್ಕಂಕಿಗೆ ಏರಿಸಿಕೊಂಡ ಮಾನೆ, ಬಳಿಕ ಎಲ್ಲ ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಅಂತಿಮವಾಗಿ 7,598 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಶ್ರೀನಿವಾಸ್ ಮಾನೆ ಕಿರು ಪರಿಚಯ
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ವಿಷ್ಣುರಾವ್ ಮಾನೆ ಹಾಗೂ ನಿರ್ಮಲಾ ದಂಪತಿಗೆ 1974ರ ಆಗಸ್ಟ್ 6ರಂದು ಜನಿಸಿದ ಶ್ರೀನಿವಾಸ್ ಮಾನೆ, ತಮ್ಮ ಶಾಲಾ ಶಿಕ್ಷಣವನ್ನು ಹುಬ್ಬಳ್ಳಿ ಹಾಗೂ ಸಂಡೂರಿನಲ್ಲಿ ಪೂರೈಸಿದರು. ಹುಬ್ಬಳ್ಳಿಯ ಜೆ.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.
2000-01ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಸಮಿತಿ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಶ್ರೀನಿವಾಸ್ ಮಾನೆ ಆರಂಭಿಸಿದರು. ಆನಂತರ ಅವರು ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
2008ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಶ್ರೀನಿವಾಸ್ ಮಾನೆ ಪರಾಭವಗೊಂಡಿದ್ದರು. 2009ರಲ್ಲಿ ವಿಧಾನಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಹುಬ್ಬಳ್ಳಿ-ಧಾರವಾಡ ಭಾಗದಿಂದ ಸ್ಪರ್ಧಿಸಿ ಚುನಾಯಿತರಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್‍ನಿಂದ ಮೊದಲ ಬಾರಿ ಕಣಕ್ಕಿಳಿದಿದ್ದ ಶ್ರೀನಿವಾಸ್ ಮಾನೆ, ಬಿಜೆಪಿಯ ಹಿರಿಯ ನಾಯಕ ಸಿ.ಎಂ.ಉದಾಸಿ ವಿರುದ್ಧ 6514 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.