ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ನಂಬುವುದಿಲ್ಲ ಎಂಬುದಕ್ಕೆ ಉಪ ಚುನಾವಣೆ ಫಲಿತಾಂಶವೇ ಸಾಕ್ಷಿ: ಝಮೀರ್ ಅಹ್ಮದ್

Update: 2021-11-02 15:01 GMT

ಬೆಂಗಳೂರು, ನ.2: ಹಾನಗಲ್ ಹಾಗೂ ಸಿಂದಗಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ನಂಬುವುದಿಲ್ಲ ಎಂಬುದಕ್ಕೆ ಈ ಉಪ ಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಪಂಚಾಯಿತಿಯ ಸದಸ್ಯನಾಗಿದ್ದ ವಿದ್ಯಾವಂತ ಯುವಕ ನಿಯಾಝ್ ಶೇಖ್‌ನನ್ನು ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಆತನ ನಾಯಕತ್ವವನ್ನೆ ಅಂತ್ಯಗೊಳಿಸಿದೆ ಎಂದು ಕಿಡಿಗಾರಿದರು.

ಬಿಜೆಪಿ ಪಕ್ಷದ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರ ಒಗ್ಗಟ್ಟಿನ ಹೋರಾಟದ ಪರಿಣಾಮವಾಗಿ ಶ್ರೀನಿವಾಸ್ ಮಾನೆ ಗೆಲುವಿನ ನಗೆ ಬೀರಿದ್ದಾರೆ. ಅವರೊಬ್ಬ ಉತ್ತಮ ಅಭ್ಯರ್ಥಿಯಾಗಿದ್ದು ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಸೇವೆ ಸಲ್ಲಿಸಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. 60 ಸಾವಿರಕ್ಕೂ ಹೆಚ್ಚು ಮತಗಳನ್ನು ನಮ್ಮ ಅಭ್ಯರ್ಥಿ ಅಶೋಕ್ ಮನಗೂಳಿ ಪಡೆದಿದ್ದಾರೆ. ಜೆಡಿಎಸ್‌ನವರು ಅಲ್ಲಿಯೂ ಓರ್ವ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯನ್ನು ಕಣಕ್ಕಿಳಿಸಿ ಬಲಿಪಶು ಮಾಡಿದೆ. ಜೆಡಿಎಸ್‌ನವರಿಂದ ಅಲ್ಪಸಂಖ್ಯಾತರು ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News