ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ: ರಮೇಶ್ ಬಾಬು
ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಾತ್ಯಾತೀತ ಮನೋಭಾವದ ರಾಜಕೀಯ ಮನಸ್ಸುಗಳು ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ರಾಜ್ಯದ ಜೆಡಿಎಸ್, ಜನತಾ ಪರಿವಾರದ ನಾಯಕರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಬಹಿರಂಗ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ
ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ 2023ರ ವಿಧಾನಸಭಾ ಚುನಾವಣೆಯ ದೃವೀಕರಣಕ್ಕೆ ಮುನ್ನುಡಿ ಬರೆದಿರುತ್ತದೆ. ಈ ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಬಿಜೆಪಿ ಬಿ ಟೀಮ್, ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ನಡೆಸಿದ ಷಡ್ಯಂತ್ರವನ್ನು ತಾವು ಸೂಕ್ಷ್ಮವಾಗಿ ಗಮನಿಸಿರುತ್ತೀರಿ. ಜೆಡಿಎಸ್ ಮತ್ತು ಜನತಾ ಪರಿವಾರದ ಮೂಲ ಸೈದ್ಧಾಂತಿಕ ನಿಲುವು ಸಮಾಜವಾದದ ಪರವಾಗಿದ್ದು, ಕಾಂಗ್ರೆಸ್ ಪಕ್ಷದ ಮೂಲ ನಿಲುವುಗಳಿಗೆ ಅನುಗುಣವಾಗಿರುತ್ತದೆ. ಜನತಾ ಬೇರುಗಳು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ಅನುಗುಣವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜನಬಳಕೆಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕರ್ನಾಟಕದ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಬೆಲೆ ಏರಿಕೆಯನ್ನು ಸಮರ್ಪಿಸಿಕೊಳ್ಳುತ್ತಿದ್ದು, ಸರ್ಕಾರವನ್ನು ಖಾಸಗಿ ವಲಯ ಮತ್ತು ಕಾರ್ಪೊರೇಟ್ ವಲಯಕ್ಕೆ ಅರ್ಪಣೆ ಮಾಡುತ್ತಿದೆ. ಎರಡೂ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯವನ್ನು ಕಂಡಿದ್ದು, ಕರ್ನಾಟಕದಲ್ಲಿ ಆಡಳಿತ ಯಂತ್ರ ಕುಸಿತವಾಗಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಚುನಾವಣಗಳ ಸಂದರ್ಭದಲ್ಲಿ ಬಿಜೆಪಿ ವ್ಯಕ್ತಿಗತ ನಿಂದನೆಯ ಹಿಡನ್ ಆಜೆಂಡಾ ಬಳಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಉಪಚುನಾವಣೆಯಲ್ಲಿ, ಅದರಲ್ಲೂ ವಿಶೇಷವಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಆಡಳಿತ ಯಂತ್ರದ ದುರುಪಯೋಗ, ಆಮಿಷಗಳ ನಡುವೆಯೂ ಅಲ್ಲಿನ ಮತದಾರರು ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಪ್ರಭುದ್ಧತೆಯ ಉತ್ತರವನ್ನು ನೀಡಿರುತ್ತಾರೆ. ಇದು ಕೇವಲ ಉಪಚುನಾವಣೆಯ ಫಲಿತಾಂಶಕ್ಕೆ ಸೀಮಿತವಾಗಿರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತು ಜಾತ್ಯಾತೀತ ನಿಲುವುಗಳನ್ನು ಕಟ್ಟಿ ಹಾಕಲು ಬಿಜೆಪಿ ಮತ್ತು ಬಿಜೆಪಿಯ ಬಿ. ಟೀಮ್ ವ್ಯವಸ್ಥಿತವಾದ ಕಾರ್ಯಾಚರಣೆಯನ್ನು ನಡೆಸಿದರು.
ಕರ್ನಾಟಕದಲ್ಲಿ ಮತ್ತೊಮ್ಮೆ ವಾಮ ಮಾರ್ಗದಲ್ಲಿ ಬಿಜೆಪಿಯ ಸರ್ಕಾರವನ್ನು ಪ್ರತಿಷ್ಠಾಪಿಸುವ ಹುನ್ನಾರ ಈ ಉಪಚುನಾವಣೆಯ ಮುಖಾಂತರ ನಡೆಸಿದರು. ಆದರೆ ಪ್ರಬುದ್ಧ ಮತದಾರರು ಇದನ್ನು ವಿಫಲಗೊಳಿಸುವುದರ ಮೂಲಕ ರಾಜಕೀಯ ದೃವೀಕರಣದ ಮುನ್ನುಡಿಗೆ ಅವಕಾಶ ಕಲ್ಪಿಸಿದ್ದಾರೆ.
ಕರ್ನಾಟಕ ಹಿತದೃಷ್ಟಿಯಿಂದ 2023ರ ವಿಧಾನಸಭಾ ಚುನಾವಣೆಗೆ ರಾಜಕೀಯ ದೃವೀಕರಣ ಆನಿವಾರ್ಯವಾಗಿರುತ್ತದೆ. ಜಾತ್ಯಾತೀತ ಮನೋಭಾವದ ರಾಜಕೀಯ ಮನಸ್ಸುಗಳು ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಸಮರ್ಥ ರಾಜಕೀಯ ಶಕ್ತಿಯನ್ನು ಕರ್ನಾಟಕದಲ್ಲಿ ಮತ್ತು ಆ ಮೂಲಕ ಭಾರತ ದೇಶದಲ್ಲಿ ಸ್ಥಾಪಿಸುವ ದೃಷ್ಟಿಯಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕಾಗಿದೆ.
ಸಮಾಜವಾದದ ಹಿನ್ನೆಲೆ ಇರುವ ಹಾಗೂ ಜಾತ್ಯಾತೀತ ಭದ್ರತೆ ಹೊಂದಿರುವ ಜೆಡಿಎಸ್ ಮತ್ತು ಜನತಾ ಪರಿವಾರದ ಶಾಸಕರು, ಮಾಜಿ ಶಾಸಕರು ಹಾಗೂ ನಾಯಕರು ರಾಜಕೀಯ ತೀರ್ಮಾನ ಕೈಗೊಳ್ಳಲು ಇದು ಸಕಾಲವಾಗಿದ್ದು, 2023ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಭಾರತ ರಾಷ್ಟ್ರೀಯ ಪಕ್ಷವನ್ನು ಸೇರಲು ಈ ಮೂಲಕ ಮನವಿ ಮಾಡುತ್ತೇನೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 16 ತಿಂಗಳು ಬಾಕಿಯಿದ್ದು, ಕರ್ನಾಟಕದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷ ಮಾತ್ರ ಪರ್ಯಾಯವಾಗಿದ್ದು, ತಮ್ಮ ಪ್ರಭುದ್ಧ ತೀರ್ಮಾನದ ಮೂಲಕ ಕಾಂಗ್ರೆಸ್ ಪಕ್ಷ ಸೇರಲು ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಪತ್ರದಲ್ಲಿ ತಿಳಿಸಿದ್ದಾರೆ.