×
Ad

ಸಿಬ್ಬಂದಿ ಮೇಲೆ ಹಲ್ಲೆ: ಐಟಿ ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ

Update: 2021-11-02 21:14 IST

ಬೆಂಗಳೂರು, ನ.2: ಎ-ಒನ್ ಸ್ಟೀಲ್ ಗ್ರೂಪ್‍ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಮ್ಮ ವಿರುದ್ಧ ನಡೆಸಲಾಗುತ್ತಿರುವ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ತನಿಖೆ ಮುಂದುವರೆಸುವಂತೆ ಸೂಚನೆ ನೀಡಿದೆ.

ಬೆಂಗಳೂರು ಮೂಲದ ಕಬ್ಬಿಣ ತಯಾರಕರಾದ ಎ-ಒನ್ ಸ್ಟೀಲ್ ಗ್ರೂಪ್‍ನ ಸ್ಥಳೀಯ ಕಚೇರಿಗಳಲ್ಲಿ ಆಗಸ್ಟ್ 2019ರಲ್ಲಿ ಐಟಿ ದಾಳಿ ನಡೆದಿತ್ತು. ದಾಳಿಯ ಸಮಯದಲ್ಲಿ ಐಟಿ ಅಧಿಕಾರಿಗಳು ನೌಕರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಧಿಕಾರಿಗಳು ಥಳಿಸಿದ್ದರಿಂದ ಕೆಲ ನೌಕರರು ಸ್ಥಳದಲ್ಲೇ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಪವನ್ ಎಂಬ ನೌಕರನಿಗೆ ಕಪಾಳಮೋಕ್ಷ ಮಾಡಲಾಗಿದ್ದು, ಆತನ ಕಿವಿಗೆ ಗಾಯವಾಗಿ ರಕ್ತ ಹೆಪ್ಪುಗಟ್ಟಿದೆ. ಪರಿಣಾಮವಾಗಿ ಆತನ ಶ್ರವಣ ಶಕ್ತಿಯೂ ಕಡಿಮೆಯಾಗಿದೆ.

ತನ್ನ ಮೇಲೆ ಅಧಿಕಾರಿಗಳು ನಡೆಸಿದ ದೌರ್ಜನ್ಯದ ವಿರುದ್ಧ ಹಾಗೂ ನ್ಯಾಯಕ್ಕಾಗಿ ಪವನ್ ಅವರು ನ್ಯಾಯಾಲಯದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಆದಾಯ ತೆರಿಗೆ ಇಲಾಖೆಯು ಪವನ್ ಅವರ ಮನವಿಯನ್ನು ಸುಳ್ಳು ಮತ್ತು ಆಧಾರ ರಹಿತವೆಂದು ವಜಾಗೊಳಿಸಬೇಕೆಂದು ಒತ್ತಾಯಿಸಿ ಅರ್ಜಿಯನ್ನು ಸಲ್ಲಿಸಿತು.

ಆದರೆ, ಹೈಕೋರ್ಟ್ ಪವನ್ ಮತ್ತು ಸಂತ್ರಸ್ತರು ನ್ಯಾಯಾಲಯಕ್ಕೆ ಸಲ್ಲಿಸಿದ ಎಲ್ಲ ಸಾಕ್ಷ್ಯಧಾರಗಳ ಆಧಾರದ ಮೇಲೆ ರಿಟ್ ಅರ್ಜಿಯನ್ನು ವಜಾಗೊಳಿಸಿ, ತನಿಖೆಯನ್ನು ಮುಂದುವರಿಸಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News