×
Ad

ನಗರ ಸ್ಥಳೀಯ ಸಂಸ್ಥೆಗಳ ಸ್ವತ್ತುಗಳನ್ನು ಹರಾಜು ಮೂಲಕ ನೀಡಬೇಕು: ಹೈಕೋರ್ಟ್

Update: 2021-11-02 21:40 IST

ಬೆಂಗಳೂರು, ನ.2: ನಗರ ಸ್ಥಳೀಯ ಸಂಸ್ಥೆಗಳು ತನ್ನ ಸ್ವತ್ತುಗಳನ್ನು ಪಾರದರ್ಶಕತೆ ಕಾಯ್ದುಕೊಳ್ಳಲು ಹರಾಜು ಪ್ರಕ್ರಿಯೆಯ ಮೂಲಕ ಮಾತ್ರ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಕೆಲವೇ ಕೆಲವು ವ್ಯಕ್ತಿಗಳು ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿಗಳನ್ನು ಪಡೆದು ದಬ್ಬಾಳಿಕೆ ನಡೆಸಿ ಸುಲಿಗೆ ಮಾಡಲು ಅವಕಾಶ ನೀಡಬಾರದು ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣ ಪಂಚಾಯಿತಿಯು ಅಂಗಡಿ ಮಳಿಗೆಗಳನ್ನು ಭಾಗಶಃ ಹರಾಜು ಮಾಡಿದೆ ಮತ್ತು ಅದು ಕೆಲವು ಅಂಗಡಿಗಳ ಗುತ್ತಿಗೆ ಅವಧಿಯನ್ನು ಏಕಪಕ್ಷೀಯವಾಗಿ ವಿಸ್ತರಣೆ ಮಾಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರಕಲಗೂಡು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ, ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆಸ್ತಿಯನ್ನು ಸಾರ್ವಜನಿಕ ಹರಾಜು ನಡೆಸದೆ ಸುತ್ತೋಲೆ ಮೂಲಕ ಗುತ್ತಿಗೆ ನೀಡಲಾಗಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ಹೈಕೋರ್ಟ್ ತೀರ್ಪಿಗೂ ವಿರುದ್ಧವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. 

ಹಲವು ನಗರ ಪಾಲಿಕೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ಪುರಸಭೆಗಳು ತಮ್ಮದೇ ಆದ ಕಟ್ಟಡಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ಅಂಗಡಿ ಮಳಿಗೆಗಳೂ ಸಹ ಇರುತ್ತವೆ. ಅವುಗಳ ನಿಯಂತ್ರಣದಲ್ಲಿರುವ ಮಳಿಗೆಗಳ ಗುತ್ತಿಗೆ ಅಥವಾ ಬಾಡಿಗೆ ನೀಡುವಾಗ ಏಕರೂಪದ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಆ ರೀತಿಯ ಏಕರೂಪದ ನಿಯಮದಿಂದ ಪಾರದರ್ಶಕತೆ ಬರುತ್ತದೆ. ಹೀಗಾಗಿ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೊಳಿಸಬೇಕೆಂದರೆ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವತ್ತುಗಳನ್ನು ಬಾಡಿಗೆ ಅಥವಾ ಹರಾಜು ಮಾಡುವಾಗ ಕಡ್ಡಾಯವಾಗಿ ಹರಾಜು ಪದ್ದತಿ ಅನುಸರಿಸಬೇಕು ಮತ್ತು ಎಲ್ಲ ಪ್ರಜೆಗಳು ಅದರಲ್ಲಿ ಭಾಗವಹಿಸುವಂತಾಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಮುನ್ಸಿಪಾಲಿಟಿ ನಿಯಮಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಯ್ದುಕೊಳ್ಳಲು ಒತ್ತು ನೀಡಬೇಕು ಮತ್ತು ಇದರಲ್ಲಿ ವೈಯಕ್ತಿಕ ಅಥವಾ ಒಂದು ವರ್ಗದ ಹಿತಾಸಕ್ತಿ ಗೌಣವಾಗಿರುವಂತೆ ನೋಡಿಕೊಳ್ಳಬೇಕು. ಕೆಲವೇ ಕೆಲವು ವ್ಯಕ್ತಿಗಳು, ಇಡೀ ಪಟ್ಟಣ ಪಂಚಾಯಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಸುಲಿಗೆ ಮಾಡಿ ದಬ್ಬಾಳಿಕೆ ನಡೆಸುವಂತಿಲ್ಲ. ಹೀಗಾಗಿ, ಅಂತಹ ಹಕ್ಕುಗಳನ್ನು ಸಾರ್ವಜನಿಕ ಹರಾಜಿನಿಂದ ಮಾತ್ರ ನೀಡುವುದು ಅತ್ಯಂತ ಸೂಕ್ತವಾದದು. ಒಂದು ವೇಳೆ ಹರಾಜು ಮಾಡಬಾರದು ಅಥವಾ ಲೈಸನ್ಸ್ ನವೀಕರಿಸಿ ಎಂದಾದರೆ ಅದು ಏಕಸ್ವಾಮ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News