×
Ad

ನ.8ರ ಸಂಪುಟ ಸಭೆಯಲ್ಲಿ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-11-03 16:41 IST

ಹುಬ್ಬಳ್ಳಿ, ನ. 3: ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಇನ್ನೂ ದಿನಾಂಕ ನಿಗದಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಕುರಿತಂತೆ ನವೆಂಬರ್ 8ರಂದು ಸಚಿವ ಸಂಪುಟದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳಗಾವಿಯಲ್ಲೇ ಎಷ್ಟು ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ನಿರ್ಧಾರ ಮಾಡಲಾಗುವುದು ಎಂದರು.

ದೀಪಾವಳಿ ಬಳಿಕ ಖರೀದಿ: ಎಂಎಸ್‍ಪಿ ದರದಲ್ಲಿ ಭತ್ತ ಖರೀದಿಸಲು ಸರಕಾರ ತೀರ್ಮಾನಿಸಿದ್ದು, ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ರಾಜ್ಯದ ರೈತರು ಭತ್ತ ಖರೀದಿ ಕೇಂದ್ರ ಆರಂಭಿಸಿ ಎಂಬ ಬೇಡಿಕೆ ಇತ್ತು. ಹೀಗಾಗಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೀಪಾವಳಿ ಮುಗಿದ ತಕ್ಷಣ ಭತ್ತ ಖರೀದಿ ಆರಂಭಿಸಲಾಗುವುದು. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.

ಎರಡೂ ಕ್ಷೇತ್ರಗಳ ಉಪಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಸಾಮೂಹಿಕವಾಗಿ ಹೊರುತ್ತೇವೆ. ನಮ್ಮ ಕೇಂದ್ರದ ನಾಯಕ ಅಮಿತ್ ಶಾ ನನ್ನ ಹೆಸರು ಹೇಳಿದಾಗಲೇ ಹೇಳಿದ್ದೆ. ನಾನು ಒಬ್ಬ ತಂಡದ ಮುಖ್ಯಸ್ಥ ಇರಬಹುದು. ಆದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News