'ಬೇರೆ ಪಕ್ಷದ ಪ್ರಧಾನಿಯಿದ್ದರೆ ಪೆಟ್ರೋಲ್ ಬೆಲೆ 30 ರೂ. ಆಗುತ್ತಿತ್ತೇ': ಸಚಿವ ಆನಂದ್ ಸಿಂಗ್ ಪ್ರಶ್ನೆ

Update: 2021-11-03 11:36 GMT
 file photo(ಆನಂದ್ ಸಿಂಗ್)

ವಿಜಯನಗರ, ನ. 3: ‘ಪ್ರಸಕ್ತ ಸನ್ನಿವೇಶನದಲ್ಲಿ ದೇಶದಲ್ಲಿ ಬೇರೆ ಪಕ್ಷದ ಪ್ರಧಾನಿ ಇದಿದ್ದರೆ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ.ಮಾಡಲು ಆಗುತ್ತಿತ್ತೇ?' ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.

ಬುಧವಾರ ಹೊಸಪೇಟೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ ಎನ್ನುವುದು ಸರಿಯಲ್ಲ. ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ದರ ಏರಿಳಿತಕ್ಕೆ ತಕ್ಕಂತೆ ನಮ್ಮ ದೇಶದಲ್ಲಿ ಬೆಲೆ ಏರುಪೇರಾಗುತ್ತದೆ. ಮೋದಿಯವರು ಕೇವಲ ಪೂಜೆ, ಪುನಸ್ಕಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

‘ಬೆಲೆ ಏರಿಕೆ ತಡೆಯಲು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ವಿಪಕ್ಷಗಳ ಆರೋಪ ಸರಿಯಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದರೆ ಸಿಂದಗಿ ಕ್ಷೇತ್ರದಲ್ಲಿ ಗೆದ್ದಿದ್ದು ಹೇಗೆ? ಎಂದು ಪ್ರಶ್ನಿಸಿದ ಅವರು, ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸ್ಥಳೀಯ ವಿಷಯ ನೋಡಿಕೊಂಡು ಜನ ಮತ ಚಲಾಯಿಸುತ್ತಾರೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಗೆ ದಿಕ್ಸೂಚಿಯಲ್ಲ' ಎಂದು ತಿಳಿಸಿದರು.

‘ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಒಳಪಿತೂರಿ ನಡೆಸಿದ್ದರಿಂದ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದ್ದರು. ಹೀಗಾಗಿ ಜನ ಅವರನ್ನು ಗೆಲ್ಲಿಸಿದ್ದಾರೆಂಬ ಮಾಹಿತಿ ಇದೆ. ಒಳ್ಳೆಯ ಕೆಲಸ ಮಾಡಿದವರನ್ನು ಜನ ಖಂಡಿತವಾಗಿಯೂ ಗೆಲ್ಲಿಸುತ್ತಾರೆ' ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.

‘ಮೈಸೂರು ದಸರಾ ಮಾದರಿಯಲ್ಲಿ ಪ್ರತಿವರ್ಷ ಹಂಪಿ ಉತ್ಸವ ಮಾಡಬೇಕು. ಅದಕ್ಕಾಗಿ 10 ಕೋಟಿ ರೂ.ಅನುದಾನ ಮೀಸಲಿಡಬೇಕು. ಈ ಕುರಿತ ಪ್ರಸ್ತಾವದ ಕಡತ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ನ.8ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಆನಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News