ಮುಳುಗುವ ಹಂತದಲ್ಲಿದ್ದ ಕಾಂಗ್ರೆಸ್ ಹಾನಗಲ್ ನಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದೆ: ಸಚಿವ ಈಶ್ವರಪ್ಪ
ಶಿವಮೊಗ್ಗ,ನ.3: 'ಮುಳುಗುವ ಹಂತದಲ್ಲಿದ್ದ ಕಾಂಗ್ರೆಸ್ ಹಾನಗಲ್ ನಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದೆ' ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಉಪಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ್ದಾರೆ.
''ಈಗ ಎಲ್ಲೋ ಒಂದು ಚೂರು ಹಾನಗಲ್ ನಲ್ಲಿ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದ್ದಾರೆ. ಅದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸುನಾಮಿ ಎನಿಸಿಬಿಟ್ಟಿದೆ. ಕಡಿಮೆ ಅಂತರದಲ್ಲಿ ಆಕಸ್ಮಿಕವಾಗಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ತೇವೆ'' ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವಿರೋಧಿ ಸುನಾಮಿ ಹೇಳಿಕೆಗೆ ಪ್ರತಿಕ್ರಿಯಿಸರುವ ಅವರು, 'ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋದ್ರು,ಈಗ ಉಪಚುನಾವಣೆ ಸುನಾಮಿಯಲ್ಲಿ ಕಾಂಗ್ರೆಸ್ ಸಿಂದಗಿಯಲ್ಲಿ ಕೂಡ ಈಗ ಕೊಚ್ಚಿ ಹೋಗಿದೆ' ಎಂದು ತಿರುಗೇಟು ನೀಡಿದರು.
ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಸ್ಥಾನ ಇಲ್ಲ ಎಂದು ಉಪಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ.ಕಾಂಗ್ರೆಸ್ ಕೂಡ ಪ್ರಾದೇಶಿಕ ಪಕ್ಷವಾಗಿ ಇಳಿಯುತ್ತಿದ್ದು, ಕುಗ್ಗುತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೇ ಒಂದು ಸೋಲು ಎಲ್ಲವನ್ನೂ ತೀರ್ಮಾನ ಮಾಡಲ್ಲ. ನಾವು ಲೋಕಸಭೆ, ಉಪಚುನಾವಣೆ, ಪಾಲಿಕೆ ಹಲವೆಡೆ ನಾವು ಗೆದ್ದಿದ್ದೆವೆ .ಗೆಲುವೇ ಬಿಜೆಪಿಯ ತೀರ್ಮಾನ. ಜನ ಕೂಡ ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಹೇಳಿದ ಪ್ರತಿಯೊಂದು ಹೇಳಿಕೆ ಕೂಡ ಸುಳ್ಳಾಗುತ್ತೆ.ಮೊದಲು ಅವರು ಅವರ ಪಕ್ಷದ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ ಎಂದು ತಾಕೀತು ಮಾಡಿದರು.