×
Ad

ಎಲ್ಲ ಅಪರಾಧ ಕೃತ್ಯಗಳಿಗೂ ಎಸ್ಸಿ-ಎಸ್ಟಿ ಕಾಯ್ದೆ ಬೇಡ: ಹೈಕೋರ್ಟ್

Update: 2021-11-03 18:30 IST

ಬೆಂಗಳೂರು, ನ.3: ಸಂತ್ರಸ್ತ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ ಸೇರಿರುವವನು ಎಂಬ ಒಂದೇ ಕಾರಣಕ್ಕೆ ಎಲ್ಲ ಅಪರಾಧ ಕೃತ್ಯಗಳಿಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಅನ್ವಯಿಸುವುದು ಸರಿಯಲ್ಲ ಎಂದಿರುವ ಹೈಕೋರ್ಟ್, ಅಪರಾಧದ ಉದ್ದೇಶ ಜಾತಿ ಕಾರಣವಾಗಿದ್ದರೆ ಮಾತ್ರ ಈ ಕಾಯ್ದೆಯನ್ನು ಅನ್ವಯಿಸಬಹುದು ಎಂದು ಆದೇಶಿಸಿದೆ.

ಜಾತಿ ಕಾರಣಕ್ಕಾಗಿ ಅಲ್ಲದೆ ನಡೆದ ಅಪರಾಧ ಕೃತ್ಯದಲ್ಲಿ ಘಟಿಸಿದ ಅಪರಾಧ ಮತ್ತು ಕಾರಣವಾದ ವಿಷಯಗಳ ಆಧಾರದಲ್ಲಿ ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಬೇಕೇ ವಿನಃ, ಸಂತ್ರಸ್ತ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಕಾಯ್ದೆಯ ಸೆಕ್ಷನ್ 3ರ ಅಡಿ (ದೌರ್ಜನ್ಯ) ಪ್ರಕರಣ ದಾಖಲಿಸಬಾರದು ಎಂದು ಸ್ಪಷ್ಟಪಡಿಸಿದೆ. 

ಜಾತಿ ಆಧಾರಿತ ದಾಳಿ ಅಥವಾ ದ್ವೇಷದಿಂದ ನಡೆಸಿದ ಅಪರಾಧ ಕೃತ್ಯಕ್ಕೆ ಅಷ್ಟೇ ಎಸ್ಸಿ-ಎಸ್ಟಿ ದೌರ್ಜನ್ಯ ಅಡಿ ಪ್ರಕರಣ ದಾಖಲಿಸಬೇಕು ಮತ್ತು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಬೇಕು. ಈ ವೇಳೆ ಆರೋಪವನ್ನು ಪರಿಶೀಲಿಸಬೇಕು. ಸುಖಾಸುಮ್ಮನೆ ಆರೋಪ ಹೊರಿಸಬಾರದು. ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಎಸ್ಸಿ-ಎಸ್ಟಿ ಸಮುದಾಯವನ್ನು ಜಾತಿ ಆಧಾರಿತ ದಾಳಿಯಿಂದ ರಕ್ಷಣೆ ಮಾಡಲಿಕ್ಕಷ್ಟೇ ಬಳಸಬೇಕು. ಈ ವಿಚಾರದಲ್ಲಿ ತನಿಖಾಧಿಕಾರಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಆದೇಶಿಸಿದೆ.

ಪ್ರಕರಣವೇನು: ಶ್ರೀಸಂಗಮ ಪ್ರಿಯ ಎಂಬುವರು ಮಾಡಿದ ಆರೋಪದ ಮೇರೆಗೆ ಪೊಲೀಸರು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) (ಎಫ್) 3(1) (ಜಿ) ಹಾಗೂ ಐಪಿಸಿ ಸೆಕ್ಷನ್ 172, 173 ಅಡಿ ಲೋಕನಾಥ್ ಎಂಬುವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

ಪ್ರಕರಣದ ಇಬ್ಬರೂ ವ್ಯಕ್ತಿಗಳ ನಡುವೆ ಆಸ್ತಿ ವ್ಯಾಜ್ಯವಿತ್ತು. ಈ ಹಿನ್ನೆಲೆಯಲ್ಲಿ ದೂರುದಾರ ಶ್ರೀಸಂಗಮ ಪ್ರಿಯ ಸುಳ್ಳು ದೂರು ನೀಡಿದ್ದರು. ಅದರಂತೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಲೋಕನಾಥ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ವಿಚಾರಣೆ ವೇಳೆ ಇದೊಂದು ಸಿವಿಲ್ ಕೇಸ್ ಆಗಿದ್ದರೂ ಎಸ್ಸಿ-ಎಸ್ಟಿ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟು ಎಫ್‍ಐಆರ್ ಹಾಗೂ ಈ ಮೇರೆಗೆ ವಿಶೇಷ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣೆಯನ್ನು ರದ್ದುಪಡಿ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News