×
Ad

ಪ್ರತಿಕೃತಿ ದಹನಕ್ಕೆ ಆಕ್ಷೇಪ: ಪೊಲೀಸ್ ಸಿಬ್ಬಂದಿಗೆ ಬಿಜೆಪಿ ಮಾಜಿ ಶಾಸಕ ಪಾಪಾರೆಡ್ಡಿ ಕಪಾಳಮೋಕ್ಷ; ಆರೋಪ

Update: 2021-11-03 18:44 IST
photo: twitter 

ರಾಯಚೂರು, ನ. 3: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಬಿಜೆಪಿ ಮಾಜಿ ಶಾಸಕ ಪಾಪಾರೆಡ್ಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಬುಧವಾರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಸಿದ್ದರಾಮಯ್ಯರ ಪ್ರತಿಕೃತಿ ದಹಿಸಲು ಎಸ್ಸಿ ಮೋರ್ಚಾ ಕಾರ್ಯಕರ್ತರು ಮುಂದಾಗಿದ್ದರು. ಇದಕ್ಕೆ ಆಕ್ಷೇಪಿಸಿದ ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರತಿಕೃತಿಯನ್ನು ಎತ್ತಿಕೊಂಡು ಹೋದರು. ಇದರಿಂದ ಆಕ್ರೋಶಿತರಾದ ಮಾಜಿ ಶಾಸಕ ಪಾಪಾರೆಡ್ಡಿ ಪಶ್ಚಿಮ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ರಾಘವೇಂದ್ರ ಅವರ ಕಪಾಳಕ್ಕೆ ಹೊಡೆದಿದ್ದಾರೆ.

ಅಲ್ಲದೆ, ಅವರನ್ನು ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ದಾದವು ನಡೆದಿದೆ. ಪೊಲೀಸರ ವಿರೋಧದ ನಡುವೆಯೇ ಸಿದ್ದರಾಮಯ್ಯರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಕಾರರು ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಅವಹೇಳನಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಸಮರ್ಥನೆ: ಪೊಲೀಸ್ ಕಾನ್‍ಸ್ಟೇಬಲ್ ಮಫ್ತಿಯಲ್ಲಿದ್ದರಿಂದ ನಾನು ಹಲ್ಲೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ನಮ್ಮ ಪಕ್ಷದ ಕಾರ್ಯಕರ್ತ ಎಂದು ಭಾವಿಸಿ ಥಳಿಸಿದ್ದೇನೆ. ಅವರು ನಾನು ಪ್ರಶ್ನಿಸಿದ ಸಂದರ್ಭದಲ್ಲಿ ಪೊಲೀಸ್ ಎಂದು ಹೇಳಿಲ್ಲ. ಹೀಗಾಗಿ ನನ್ನದೇನೂ ತಪ್ಪಿಲ್ಲ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News