ಪ್ರಾದೇಶಿಕ ಪಕ್ಷ ಮುಗಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಹೆಚ್.ಡಿ. ರೇವಣ್ಣ

Update: 2021-11-03 14:52 GMT

ಹಾಸನ : ಎರಡು ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನ್ನು ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಯಲಿ ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷವನ್ನ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷವನ್ನು ಬಯ್ಯಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು  ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದರು. ಆದರೆ ದೇವೇಗೌಡರು ಇರೋವರೆಗೂ ಈ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗುವುದಿಲ್ಲ. ಕಾಂಗ್ರೆಸ್ ನವರು ಕೆಲವು ಬಟ್ಟಂಗಿಗಳನ್ನು ಇಟ್ಟುಕೊಂಡು ಬೆಳಗಾದರೇ ಸಾಕು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಯ್ಯುವುದು ಇವರ ಕೆಲಸ. ಇದರಿಂದಲೇ ಸಿಂಧಗಿಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದು, ನಮ್ಮ ಪಕ್ಷದವರ ಕರೆದುಕೊಂಡು ಹೋಗಿ 31 ಸಾವಿರ ಮತಗಳಿಂದ ಸೋಲಬೇಕಾಯಿತು ಎಂದರು. 

ಒಂದು ರಾಷ್ಟ್ರೀಯ ಪಕ್ಷ ಬಿಜೆಪಿ ಮೂರು ಕಡೆ ಠೇವಣಿ ಕಳೆದುಕೊಂಡಿದ್ದು, ಪಶ್ಚಿಮ ಬಂಗಾಳದ ನಾಲ್ಕರಲ್ಲಿ ಮೂರು ಠೇವಣಿ ಕಳೆದುಕೊಂಡಿದೆ. ಒಂದು ರಾಷ್ಟ್ರೀಯ ಪಕ್ಷವೇ ಠೇವಣಿ ಕಳೆದುಕೊಂಡ ಮೇಲೆ ಜೆಡಿಎಸ್ ಪಕ್ಷದಲ್ಲಿ ಏನಿದೆ? ಸಿಂಧಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಆದರೇ ಹಾನಗಲ್ ನಲ್ಲಿ ಬಿಜೆಪಿ ಒಳಜಗಳದಿಂದ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ, ಮುಖಂಡರಿಂದಲೂ ಗೆದ್ದಿಲ್ಲ ಎಂದರು.

ಕಾಂಗ್ರೆಸ್ ನ ಇಬ್ಬರು - ಒಬ್ಬರು ಮಾಜಿ ಮುಖ್ಯಮಂತ್ರಿ, ಇನ್ನೊಬ್ನರು ಹೋಗಿ ಸಿಂಧಗಿಯಲ್ಲಿ ಪ್ರಚಾರ ಮಾಡಿ ಸೋಲು ಅನುಭವಿಸಿದರು. ಕಾಂಗ್ರೆಸ್ ನಿಂದ ಜನ ಬೇಸತ್ತು ಸಿಂಧಗಿಯಲ್ಲಿ 32 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಈ ಹೀನಾಮಾನ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ ನ ಮೊದಲ ಪ್ರಿಯಾರಿಟಿ. ಬಿಜೆಪಿ ರಾಷ್ಟ್ರೀಯ ಪಕ್ಷವೇ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಬಂದ ಮೇಲೆ ಜೆಡಿಎಸ್ ಯಾವ ಲೆಕ್ಕ. ಎಂದ ಅವರು, ಎರಡು ರಾಷ್ಟ್ರೀಯ ಪಕ್ಷಗಳಿಂದ ದುಡ್ಡು ಚೆಲ್ಲಾಟ ಆಗಿದೆ. ಕಾಂಗ್ರೆಸ್ ನವರು ಎಲ್ಲಾ ಕಡೆ ಇದೇ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

2018 ರಲ್ಲಿ ನಮ್ಮ ಪಕ್ಷದ ಏಳು ಜನ ಕರೆದುಕೊಂಡು ಹೋದರು. ಎಲ್ಲರೂ ಐವತ್ತು ಸಾವಿರದಿಂದ ಸೋತು ಮನೆಗೆ ಹೋದರು. 125 ಸೀಟ್ ಇದ್ದ ಕಾಂಗ್ರೆಸ್ 79ಕ್ಕೆ ಇಳಿಯುವ ಮೂಲಕ ಜನ ಕಾಂಗ್ರೆಸ್ ಗೆ ಬುದ್ದಿ ಕಲಿಸಿದರು. ಇದಕ್ಕೆಲ್ಲ ದೃತಿಗೆಡಬೇಕಿಲ್ಲ, ಚುನಾವಣೆಯಲ್ಲಿ ಸೋಲು-ಗೆಲುವ ಸರ್ವೆಸಾಮಾನ್ಯ ಎಂದರು. ಯಾರ ಯಾರ ಜಾತಕ ಏನಿದೆ ನಮಗೆಲ್ಲ ಗೊತ್ತಿದ್ದು, ಸಮಯ ಬಂದಾಗ ಎಲ್ಲಾವನ್ನು ಹೊರ ಹಾಕುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News