ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧಾರ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಹೊಸದಿಲ್ಲಿ, ನ.3: ಕರ್ನಾಟಕ ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧರಿಸಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರದ ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಕೌಶಲಾಭಿವೃದ್ಧಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ನಡೆಸಿದ ಸಭೆಯ ವೇಳೆ ಈ ನಿರ್ಧಾರ ಹೊರಹೊಮ್ಮಿದೆ.
ಈ ರೀತಿಯ ಸಮೀಕ್ಷೆ ಮಾಡಿಸುವುದರಿಂದ ರಾಜ್ಯದ ಯಾವ್ಯಾವ ವಲಯದಲ್ಲಿ ಎಂತೆಂತಹ ಕೌಶಲಗಳಿಗೆ ಬೇಡಿಕೆ ಇದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಇದನ್ನು ಆಧರಿಸಿ ಪ್ರಸ್ತುತ ಬೇಡಿಕೆಗಳಿಗೆ ಅನುಸಾರವಾಗಿ ಯುವಜನತೆಯನ್ನು ತರಬೇತಿಗೊಳಿಸಲು ಅನುಕೂಲವಾಗುತ್ತದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಮಟ್ಟದ ಐ.ಟಿ. ಸಚಿವರ ಸಮಾವೇಶವೊಂದನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆಗ ಅಶ್ವತ್ಥ ನಾರಾಯಣ ಅವರು, ಇಂತಹ ಸಮಾವೇಶವನ್ನು ಕರ್ನಾಟಕದಲ್ಲೇ ನಡೆಸಲು ಕೋರಿದರು. ಇದರಿಂದ, ಹೊಸ ತಾಂತ್ರಿಕತೆಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜೀವ್ ಅವರು, ಈ ಸಂಬಂಧವಾಗಿ ಕೇಂದ್ರ ಇಲಾಖೆಗೆ ಪತ್ರವನ್ನು ಬರೆಯಲು ಸಲಹೆ ನೀಡಿದರು.
ಸಚಿವ ಅಶ್ವತ್ಥ ನಾರಾಯಣ ಅವರು, ‘ಮೇಕ್ ಇನ್ ಇಂಡಿಯಾ’ ರೀತಿಯಲ್ಲಿ ‘ಮೇಕ್ ಇನ್ ಕರ್ನಾಟಕ’ಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿದೆ ಎಂದರು.