ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಬೆಳೆ ನಾಶದ ಆತಂಕ
ಚಿಕ್ಕಮಗಳೂರು, ನ.3: ಕಾಫಿನಾಡಿನಲ್ಲಿ ಬುಧವಾರ ಇಡೀ ದಿನ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆ ಧಾರಾಕಾರ ಮಳೆ ಸುರಿಯಿತು. ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಸಂಜೆ 6ರ ವೇಳೆ ಸುರಿದ ಮಳೆ ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಸುರಿದು ಕೆಲ ಹೊತ್ತು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.
ಕಳೆದ ಎರಡು ವಾರಗಳ ಹಿಂದೆ ಧಾರಾಕಾರವಾಗಿ ಸುರಿದಿದ್ದ ಮಳೆ ನಂತರ ಕ್ಷ್ಮೀಣಿಸಿತ್ತು. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯ ಸುಳಿವಿರಲಿಲ್ಲ. ಆದರೆ ಬುಧವಾರದಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದ ಬೆನ್ನಲ್ಲೆ ಬುಧವಾರ ಸಂಜೆ ವೇಳೆಗೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯಿತು.
ಬುಧವಾರ ಇಡೀ ದಿನ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಗುಡುಗು, ಮಿಂಚಿನೊಂದಿಗೆ ಸಾಧಾರಣವಾಗಿ ಆರಂಭವಾದ ಮಳೆ ನಂತರ ಸುಮಾರು 2 ಗಂಟೆಗಳ ಕಾಲ ಧಾರಾಕಾರವಾಗಿ ಆರ್ಭಟಿಸಿತು. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ ತಾಲೂಕುಗಳಲ್ಲಿ ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ಮಳೆಯ ಆರ್ಭಟ ಜೋರಾಗಿತ್ತು. ಜಿಲ್ಲೆಯ ಬಯಲು ಭಾಗದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಸಂಜೆ 5ರಿಂದ 7ರವರೆಗೆ ಎಡಬಿಡದೇ ಮಳೆ ಸುರಿಯಿತು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಸದ್ಯ ಅರೇಬಿಕಾ ಕಾಫಿ ಕಟಾವು ಹಾಗೂ ಅಡಿಕೆ ಕೊಯ್ಲು ಚಟುವಟಿಕೆ ಬಿರುಸಿನಿಂದ ನಡೆಯುತ್ತಿದ್ದು, ದಿಢೀರ್ ಸುರಿದ ಮಳೆಯಿಂದಾಗಿ ಕಾಫಿ, ಅಡಿಕೆ ಕಟಾವು, ಸಂಸ್ಕರಣೆಗೆ ಭಾರೀ ಅಡ್ಡಿಯಾದಂತಾಗಿದ್ದು, ಬೆಳೆಗಾರರು ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ. ಇನ್ನು ಭತ್ತದ ಬೆಳೆಯೂ ಈ ಅಕಾಲಿಕ ಮಳೆ ಭಾರೀ ಹಾನಿ ಮಾಡಿದ್ದು, ಭತ್ತದ ತೆನೆ ಕೊಳೆಯುವ ಭೀತಿಯಿಂದ ಕಂಗಾಲಾಗಿದ್ದಾರೆ.
ಬುಧವಾರ ಚಿಕ್ಕಮಗಳೂರು ನಗರದಲ್ಲಿ ಇಡೀ ದಿನ ಮೋಡಕವಿದ ವಾತಾವರಣ ಇದ್ದು, ಸಂಜೆ ವೇಳೆ ದಿಢೀರ್ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಕೆಲ ಹೊತ್ತು ಸ್ಥಬ್ಧಗೊಂಡಿತ್ತು. ನಗರದ ಐಜಿ ರಸ್ತೆ ಸೇರಿದಂತೆ ಕೆಲ ಬಡಾವಣೆಗಳ ರಸ್ತೆಗಳಲ್ಲಿನ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆ ಮೇಲೆ ಹರಿದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು.