×
Ad

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಕ್ರಮ ಭೂ ಮಂಜೂರಾತಿ: ಜಿ.ವೀರೇಶ್ ಆರೋಪ

Update: 2021-11-03 22:58 IST

ಚಿಕ್ಕಮಗಳೂರು, ನ.3: ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಶೋಲಾ ಕಾಡು ಸೇರಿದಂತೆ ಅಲ್ಲಿನ ವಿಶಿಷ್ಟ ಹುಲ್ಲುಗಾವಲುಗಳು ಒತ್ತುವರಿ ಆಗುತ್ತಿವೆ. ಈ ಸಂಬಂಧ ತಾಲೂಕು ಕಚೇರಿಯಲ್ಲಿ ಪ್ರಭಾವಿಗಳ ಒತ್ತುವರಿಗೆ ಅಕ್ರಮವಾಗಿ ಮಂಜೂರಾತಿ ನೀಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಕೆಲವರು ಅಕ್ರಮ ಸಕ್ರಮ ಹೆಸರಿನಲ್ಲಿ ಮಂಜೂರಾತಿಗೆ ಗಿರಿ ಪ್ರದೇಶದಲ್ಲಿ ಜಾಗ ಕಬಳಿಸಲು ಮುಂದಾಗಿದ್ದು, ಸರಕಾರಿ ಜಾಗದಲ್ಲಿರುವ ಶೋಲಾ ಕಾಡನ್ನು ಸವರಿ ತೋಟ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ತಮ್ಮ ತೋಟಗಳ ಪಕ್ಕದಲ್ಲಿರುವ ಹುಲ್ಲುಗಾವಲನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಆರೋಪಿಸಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಗಿರಿ ಪ್ರದೇಶದ ಶೋಲಾ ಕಾಡುಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿವೆ. ಈ ಹುಲ್ಲುಗಾವಲು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿದ್ದು, ನೀರನ್ನು ಸಂಗ್ರಹಿಸಿ ಕಣಿವೆ ಪ್ರದೇಶದಲ್ಲಿರುವ  ಶೋಲಾ ಕಾಡಿನಲ್ಲಿ ಜಲ ಮೂಲಗಳ ಹುಟ್ಟಿಗೆ ಕಾರಣವಾಗುತ್ತಿವೆ. ಈ ಕಾರಣದಿಂದಾಗಿ ವರ್ಷ ಪೂರ್ತಿ ಗಿರಿ ಪ್ರದೇಶದ ಕಣಿವೆಗಳಲ್ಲಿ ನೀರು ಹರಿಯುತ್ತಿರುತ್ತದೆ. ಆದರೆ ಕೆಲ ಪ್ರಭಾವಿಗಳು ಇಂತಹ ಹುಲ್ಲುಗಾವಲು, ಶೋಲಾ ಕಾಡುಗಳನ್ನು ಒತ್ತುವರಿ ಮಾಡುತ್ತಿದ್ದಾರೆ. ಹುಲ್ಲುಗಾವಲುಗಳ ನಾಶದಿಂದ ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಭೂಮಿ ನೈಸರ್ಗಿಕ ಪ್ರಕ್ರಿಯೆ ನಾಶವಾಗುವ ಶೋಲಾ ಕಾಡುಗಳು ನಶಿಸುವ ಸಾಧ್ಯತೆ ಇದೆ. ಗಿರಿ ಪ್ರದೇಶದ ಹೊನ್ನಮನಹಳ್ಳ, ಹೆಬ್ಬೆ ಹಳ್ಳ, ವೇದ ನದಿ, ಗೌರಿ ಹಳ್ಳ ಸೇರಿದಂತೆ ಅನೇಕ ನದಿ ಮೂಲಗಳಿದ್ದು, ನೈಸರ್ಗಿಕ ಕಾಡುಗಳು ಇಲ್ಲಿ ಕಾಫೀ ತೋಟಗಳಾಗಿ ಪರಿವರ್ತನೆ ಆಗುತ್ತಿವೆ. ಇದು ಇಲ್ಲಿನ ಜಲ ಮೂಲಗಳಿಗೆ ಕಂಟಕ ಆಗುತ್ತದೆ ಎಂದು ಅವರು ಅತಂಕ ವ್ಯಕ್ತಪಡಿಸಿದ್ದಾರೆ.

ಶೋಲಾ ಕಾಡು, ಹುಲ್ಲುಗಾವಲು ನೀರಿನ ಮೂಲಗಳಿರುವ ಸ್ಥಳದಲ್ಲಿ ಮತ್ತು ನೈಸರ್ಗಿಕ ಸೂಕ್ಷ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೆಸರಿನಲ್ಲಿ ಅಕ್ರಮ ಒತ್ತುವರಿಗೆ ಮಂಜೂರಾತಿ ನೀಡುವುದನ್ನು ತಾಲೂಕು ಆಡಳಿತ ನಿಲ್ಲಿಸಬೇಕು, ಮಂಜೂರಾತಿ ಕೊಡುವಾಗ ನೈಸರ್ಗಿಕ ಮಹತ್ವ ಇರುವ ಪ್ರದೇಶಗಳನ್ನು ಅರಣ್ಯ, ಕಂದಾಯ ಇನ್ನಿತರ ಇಲಾಖೆಯೊಂದಿಗೆ ಜಂಟಿ ಸ್ಥಳ ಪರಿಶೀಲಿಸಬೇಕು. ಈಗಾಗಲೇ ಈ ಭಾಗದಲ್ಲಿ ನೈಸರ್ಗಿಕ ಹಸುರಿನ ಹುಲ್ಲುಗಾವಲು ಕಣ್ಮರೆಯಾಗುತ್ತಿದ್ದು, ಇಲ್ಲಿ ಕಾಂಕ್ರಿಟ್ ಕಟ್ಟಡಗಳು, ಹೋಂ ಸ್ಟೇ, ರೆಸಾರ್ಟ್ ತಲೆಯೆತ್ತುತ್ತಿವೆ.  ಶೋಲಾ ಕಾಡುಗಳನ್ನು ಕಾಫಿ ತೋಟಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದನ್ನು ಜಿಲ್ಲಾಡಳಿತ ಕಂಡೂ ಕಾಣದಂತಿದೆ ಎಂದು ವೀರೇಶ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಎತ್ತರ ಪ್ರದೇಶವಾಗಿರುವ ಮುಳ್ಳಯ್ಯನಗಿರಿ ಶ್ರೇಣಿ ಸಂರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಬಯಲು ಸೀಮೆಯ ಆಯ್ಯನಕೆರೆ, ಮದಗದಕೆರೆ ಸೇರಿದಂತೆ ವೇದಾವತಿ ವಾಣಿವಿಲಾಸ ಸಾಗರ ಅಣೆಕಟ್ಟು, ಭದ್ರಾ ಅಣೆಕಟ್ಟು ಸೇರಿದಂತೆ ಪ್ರಮುಖ ನೀರಾವರಿ ಪ್ರದೇಶಗಳಿಗೆ, ಕಾವೇರಿ ಮತ್ತು ಕೃಷ್ಣ ಕೊಳ್ಳಗಳಿಗೆ ಗಿರಿ ಪ್ರದೇಶದಲ್ಲಿ ಹುಟ್ಟು ನೀರಿನ ಮೂಲಗಳಿಂದ ವರ್ಷ ಪೂರ್ತಿ ನೀರು ಸಿಗುತ್ತಿದೆ. ಲಕ್ಷಾಂತರ ರೈತರ ಜೀವನಾಡಿ ಈ ಚಂದ್ರದ್ರೋಣ ಪರ್ವತ ಶ್ರೇಣಿಯಾಗಿದೆ. ನೈಸರ್ಗಿಕ ಮಹತ್ವ ಇರುವ ಇಂತಹ ಪ್ರದೇಶಗಳ ರಕ್ಷಣೆಗೆ ಜಿಲ್ಲಾಡಳಿತ ಹಾಗೂ ಸರಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News