ಕಲಬುರಗಿ: ಹಾಡಹಗಲು ಬಸ್ ನಿಲ್ದಾಣದಲ್ಲೇ ಪೊಲೀಸ್ ಕಾನ್ ಸ್ಟೇಬಲ್ ಪುತ್ರನ ಬರ್ಬರ ಹತ್ಯೆ
ಕಲಬುರಗಿ, ನ.4: ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರನನ್ನು ಹಾಡಹಗಲೇ ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಇಂದು ಬೆಳಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇಲ್ಲಿನ ವಿದ್ಯಾನಗರ ನಿವಾಸಿ, ಪೊಲೀಸ್ ಕಾನ್ ಸ್ಟೇಬಲ್ ಚಂದ್ರಕಾಂತ್ ಎಂಬವರ ಪುತ್ರ ಅಭಿಷೇಕ್ ಚಂದ್ರಕಾಂತ (26) ಕೊಲೆಯಾದ ಯುವಕ.
ಅಭಿಷೇಕ್ ಎಂದಿನಂತೆ ಇಂದು ಬೆಳಗ್ಗೆ ಮನೆಯಿಂದ ಜಿಮ್ ಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಏಳೆಂಟು ಮಂದಿಯಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳನ್ನು ಹಿಡಿದು ಅವರನ್ನು ಬೆನ್ನಟ್ಟಿದೆ. ಇದನ್ನು ಗಮನಿಸಿದ ಅಭೀಷೇಕ ತನ್ನ ಬೈಕ್ ಬಸ್ ನಿಲ್ದಾಣ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದು, ಸಹಾಯಕ್ಕಾಗಿ ಜನರ ಮಧ್ಯೆಯೂ ಓಡಿದ್ದಾರೆ. ಆದರೆ ಬಸ್ ನಿಲ್ದಾಣ ಒಳಗೇ ನುಗ್ಗಿದ ದುಷ್ಕರ್ಮಿಗಳು ಅಭಿಷೇಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಗೆ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಅಶೋಕ್ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.