ಕೋವಿಡ್ ಮಾರ್ಗಸೂಚಿ ಅನುಸರಿಸಿ ಹಬ್ಬ ಆಚರಿಸೋಣ: ಸಿಎಂ ಬಸವರಾಜ ಬೊಮ್ಮಾಯಿ

Update: 2021-11-04 11:42 GMT

ಬೆಂಗಳೂರು, ನ. 4: `ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಸುಸಂದರ್ಭದಲ್ಲಿ ನರಕ ಚತುರ್ದಶಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ದುಷ್ಟಶಿಕ್ಷಣ ಹಾಗೂ ಶಿಷ್ಟರಕ್ಷಣದ ಸಂಕೇತವಾಗಿರುವ ನರಕ ಚತುರ್ದಶಿ ಹಬ್ಬವು ಜನರ ಎಲ್ಲ ದುರಿತಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಸುರಕ್ಷಿತವಾಗಿ ಹಬ್ಬ ಆಚರಿಸೋಣ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಭರವಸೆಯ ಮುನ್ನುಡಿ: `ರಾಜ್ಯದಲ್ಲಿ ಇಂದಿಗೆ ನನ್ನ ನೇತೃತ್ವದ ಬಿಜೆಪಿ ಸರಕಾರಕ್ಕೆ ನೂರು ದಿನದ ಸಂಭ್ರಮ. ಪ್ರಧಾನಿ ಮೋದಿ ಅವರ `ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಎಂಬ ಧ್ಯೇಯವಾಕ್ಯದಿಂದ ನಾವು ಪ್ರೇರಿತರಾಗಿ ಈ ಹಾದಿಯಲ್ಲಿಯೇ ನಾವು ಸಾಗುತ್ತಿದ್ದೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ಟ್ವೀಟ್ ಮಾಡಿರುವ ಅವರು, `ಮುಂಬರುವ ದಿನಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಆ ಮೂಲಕ ಸಮೃದ್ಧ ಮತ್ತು ಪ್ರಗತಿಪರ ನವ ಕರ್ನಾಟಕ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ಈ ಸುಸಂದರ್ಭದಲ್ಲಿ ನನ್ನ ಸಂಪುಟದ ಸಹೋದ್ಯೋಗಿಗಳಿಗೆ ಶುಭಾಷಯ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

`ಈ ಪ್ರೇರಣೆಯೊಂದಿಗೆ ರಾಜ್ಯದ 6.5 ಕೋಟಿ ಕನ್ನಡಿಗರ ಆಶೀರ್ವಾದದೊಂದಿಗೆ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರಕಾರ ಪಣ ತೊಟ್ಟಿದೆ. ಕನ್ನಡಿಗರ ಬದುಕನ್ನು ನವ ಚೈತನ್ಯದಿಂದ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದೇವೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News