ಇದು ದೀಪಾವಳಿ ಕೊಡುಗೆ ಅಲ್ಲ, ಉಪ ಚುನಾವಣೆಗಳ ಫಲಿತಾಂಶದ ಕೊಡುಗೆ: ಸಿದ್ದರಾಮಯ್ಯ

Update: 2021-11-04 13:45 GMT

ಬೆಂಗಳೂರು, ನ.4: ಚುನಾವಣೆಯಲ್ಲಿ ಮತದಾರರು ಬಿಜೆಪಿ ಸೋಲಿಸಿದರೆ ಪೆಟ್ರೋಲ್–ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರ ಸರಕಾರದ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಇದು ಪ್ರಧಾನಿ ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ ಎಂದು ಹೇಳಿದರು.

ಯುಪಿಎ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 125 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 65 ರೂಪಾಯಿಗಳಾಗಿತ್ತು. ಬಿಜೆಪಿ ಸರಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 82 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂಪಾಯಿಗೆ ಇಳಿಸಿದ್ದು ಮಹಾನ್ ಸಾಧನೆ ಎಂದು ಅವರು ಕಿಡಿಗಾರಿದರು.

ಅಡುಗೆ ಅನಿಲ ಬೆಲೆ ಸಾವಿರ ರೂಪಾಯಿ ತಲುಪಿದೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಏರುತ್ತಲೇ ಇದೆ. ಈ ಬೆಲೆಗಳು ಕೂಡಾ ಇಳಿಯಬೇಕಾದರೆ ಬಿಜೆಪಿಯನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು ಸೋಲಿಸುತ್ತಲೇ ಇರಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಸದ್ಯದಲ್ಲಿಯೇ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‍ಗಳಿಗೆ ಹಾಗೂ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ನರೇಂದ್ರ ಮೋದಿ ಅವರು ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ನಡೆಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News