ಲಂಚ ಪ್ರಕರಣ: ಆರೋಪಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

Update: 2021-11-04 13:43 GMT

ಬೆಂಗಳೂರು, ನ.4: ಅಕ್ಷರ ದಾಸೋಹ ಕಾರ್ಯಕ್ರಮಕ್ಕಾಗಿ ಬಳಕೆ ಮಾಡಿಕೊಂಡಿದ್ದ ಕಾರಿಗೆ ಪಾವತಿಸಬೇಕಾದ ಬಾಡಿಗೆ ಹಣದ ಚೆಕ್ ವಿತರಿಸಲು 1 ಸಾವಿರ ರೂ. ಲಂಚ ಪಡೆದ ಕೊಪ್ಪಳ ಜಿ.ಪಂ ಕಚೇರಿ ಗುಮಾಸ್ತನಿಗೆ ಒಂದು ದಶಕದ ವಿಚಾರಣೆ ನಂತರ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 

ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದರೂ ಅಧೀನ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಗೆ, ಲೋಕಾಯುಕ್ತ ಪೊಲೀಸರು ಹೈಕೋರ್ಟ್‍ನಲ್ಲಿ ಒಂಬತ್ತು ವರ್ಷ ಕಾಲ ಸುಧೀರ್ಘವಾಗಿ ಕಾನೂನು ಹೋರಾಟ ನಡೆಸಿ ಶಿಕ್ಷೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಲಂಚ ಸ್ವೀಕರಿಸಿ ಭ್ರಷ್ಟಾಚಾರ ಎಸಗಿದ ಕೃತ್ಯವು ಅಗತ್ಯ ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಹಣಕಾಸು ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಎಸ್.ನಿರುಪಡಿಗೆ, ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನ್ಯಾಯಪೀಠ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿದೆ. 

ಏನಿದು ಪ್ರಕರಣ: ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಬಳಸಲು ಕೊಪ್ಪಳ ಜಿಲ್ಲಾ ಪಂಚಾಯತಿ, 2008ರ ಜೂನ್ ಮತ್ತು ಜುಲೈನಲ್ಲಿ ಕಾರೊಂದನ್ನು ಬಾಡಿಗೆಗೆ ಪಡೆದಿತ್ತು. ಈ ಎರಡು ತಿಂಗಳಿಗೂ ತಲಾ 15,250 ರೂ. ಪಾವತಿಸಬೇಕಿತ್ತು. ಆದರೆ, ಚೆಕ್ ವಿತರಿಸಲು 10 ಸಾವಿರ ರೂ. ಲಂಚ ನೀಡುವಂತೆ ಪಂಚಾಯತಿ ಹಣಕಾಸು ವಿಭಾಗದ ಕ್ಲರ್ಕ್ ನಿರುಪಡಿ ಬೇಡಿಕೆಯಿಟ್ಟಿದ್ದರು. ಹೀಗಾಗಿ, ಕೊಪ್ಪಳ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News