×
Ad

ಇಂಧನ ದರ ಇಳಿಕೆ ಮತದಾರರ ಶಕ್ತಿಯ ಪ್ರತೀಕ: ಡಿ.ಕೆ.ಶಿವಕುಮಾರ್

Update: 2021-11-04 20:13 IST
photo: twitter

ಬೆಂಗಳೂರು, ನ.4: ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಮತದಾರನ ತೀರ್ಪಿನಿಂದ ಬೆಳಕು ಬರಲಿದೆ ಎಂದು ನಾನು ನಿನ್ನೆಯೇ ಹೇಳಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸೇರಿ ಕಡಿಮೆ ಮಾಡಿವೆ. ದೇಶಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಹುತೇಕ ಕಡೆ ಸರಕಾರದ ವಿರುದ್ಧ ಜನ ಮತದಾನ ಮಾಡಿದ್ದಾರೆ. ನಾವು ಕೂಡ ಈ ಚುನಾವಣೆ ಮೂಲಕ ಸಂದೇಶ ರವಾನಿಸಬೇಕು, ಎಚ್ಚರಿಕೆ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡಿದ್ದೆವು. ಅದರಂತೆ ಪ್ರಬುದ್ಧ ಮತದಾರರು ಮತ ಹಾಕಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆ ಮಾಲಕರು ಅನ್ನೋದು ಮತ್ತೆ ಸಾಬೀತಾಗಿದೆ. ಹೀಗಾಗಿಯೇ ಇಂಧನ ದರ ಕಡಿಮೆ ಆಗಿದೆ. ಅಡುಗೆ ಅನಿಲ ಸೇರಿ ಎಲ್ಲ ವಸ್ತುಗಳ ಬೆಲೆ ಇಳಿಕೆ ಆಗುವವರೆಗೂ ಕಾಂಗ್ರೆಸ್ ಇದೇ 14 ರಿಂದ ದೇಶದೆಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟ ಮುಂದುವರಿಸುತ್ತದೆ ಎಂದು ಶಿವಕುಮಾರ್ ತಿಳಿಸಿದರು.

ಈ ಹೋರಾಟ ಇಲ್ಲಿಗೇ ನಿಲ್ಲಬಾರದು. ಯುವಕರಿಗೆ ಉದ್ಯೋಗ ಸಿಗಬೇಕು. ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಕಬ್ಬಿಣ, ಸೀಮೆಂಟ್ ದಿನಬಳಕೆ ವಸ್ತುಗಳ ಬೆಲೆಯೂ ಇಳಿಯಬೇಕು ಎಂದು ಅವರು ಆಗ್ರಹಿಸಿದರು.

ಇಂಧನ ಬೆಲೆ ಇಳಿಸಿದ ಸರಕಾರದ ತೀರ್ಮಾನ ಸ್ವಾಗತಿಸುತ್ತೇವೆ. ಆದರೆ ತೆರಿಗೆ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಬೇಕು. ಜನ ಈ ಆಡಳಿತ ವಿರುದ್ಧ ಬೇಸತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ ಎಂದು ಅವರು ಹೇಳಿದರು.

ಕಲ್ಲಿದ್ದಲು ಕೊರತೆ ವಿಚಾರದಲ್ಲಿ ಸರಕಾರದ ಕಾರ್ಯಸೂಚಿ ಏನು?: ಇನ್ನು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಬಂಡವಾಳ ಹೂಡಿಕೆದಾರರು ಬರುವುದಿಲ್ಲ. ಮುಂದೆ ಉದ್ಯೋಗ ಮತ್ತಷ್ಟು ನಷ್ಟವಾಗುವ ಸಾಧ್ಯತೆ ಇದೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ 7 ರಂದು ನಮ್ಮ ನಾಯಕರ ಜತೆ ಚರ್ಚೆ ಮಾಡಿ ಕಾರ್ಯಕ್ರಮದ ವಿವರ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯಕ್ಕೆ ಒಂದು ದಿನಕ್ಕೆ ಮಾತ್ರ ಸಾಕಾಗುವ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಸಾಮಥ್ರ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಸದ್ಯಕ್ಕೆ ಹೆಚ್ಚು ಮಳೆ ಇರುವುದರಿಂದ ಪರಿಸರ ಕೈ ಹಿಡಿದಿದೆ ಎಂದು ಅವರು ಹೇಳಿದರು.

ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಗೆ ಸರಕಾರದ ಕಾರ್ಯಸೂಚಿ ಏನು? ಎಂದು ತಿಳಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು. 

ಕಲ್ಲಿದ್ದಲು ಮಂತ್ರಿ ನಮ್ಮವರೇ ಇದ್ದಾರೆ. ಹಿಂದೆ ಹೈಕೋರ್ಟ್ ತೀರ್ಪು ಪ್ರಕಾರ ಕಲ್ಲಿದ್ದಲು ಬಳಸಿಕೊಳ್ಳಲು ಮುಂದಾದಾಗ ನಮ್ಮ ಸರಕಾರಕ್ಕೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ, ಅದನ್ನು ತಪ್ಪಿಸಲು ಆಗಿನ ಕೇಂದ್ರ ಸಚಿವರು ಅನುಮತಿ ನೀಡಿರಲಿಲ್ಲ. ಬದಲಿಗೆ ನಮಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಈಗ ಅವರದೇ ಸರಕಾರ ಇದೆ ಎಂದು ಅನುಮತಿ ನೀಡಿದ್ದಾರೆ. ಈಗ ಕೆಲಸ ಶುರು ಆಗಿದೆ ಎಂದು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರಹ್ಲಾದ್ ಜೋಷಿ ರಾಜ್ಯಕ್ಕೆ ನಿತ್ಯ 24 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಸಲಾಗುತ್ತಿದೆ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಅವರು ಹೇಳಿರುವ ಕಲ್ಲಿದ್ದಲು ಇನ್ನೂ ರಸ್ತೆಯಲ್ಲಿಯೇ ಬರುತ್ತಿದೆ. ಬಳ್ಳಾರಿ, ರಾಯಚೂರಿಗೆ ಹೋಗಿ, ಅಲ್ಲೆಲ್ಲ ಎಷ್ಟು ಯುನಿಟ್ ವಿದ್ಯುತ್ ಸಾಮಥ್ರ್ಯ ಇದೆ, ಎಷ್ಟು ಉತ್ಪಾದನೆ ಆಗುತ್ತಿದೆ, ಎಷ್ಟು ಘಟಕಗಳು ಕಾರ್ಯ ಮಾಡುತ್ತಿವೆ ಎಂದು ನೋಡಿ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆ ಪುಸ್ತಕ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಒಳ್ಳೆಯ ಜಾಹೀರಾತು ನೀಡಲಿ. ಅವರ ಸಾಧನೆ ನೋಡಿ ಅವರದೇ ಜಿಲ್ಲೆ ಜನ ಉಪಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ. ಅವರ ಸಾಧನೆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ನಾವು ಅವರ ಆಡಳಿತದ ಬಗ್ಗೆ ದೂರುತ್ತಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಬೇಕು ಎಂದು ಹೇಳಿದ್ದಾರೆ. ಅದು ಅವರ ಇಚ್ಛೆ. ವ್ಯಕ್ತಿ ಮೇಲೆ ಪಕ್ಷ ಇಲ್ಲ, ಪಕ್ಷದ ಮೇಲೆ ಸರಕಾರ  ಇದೆ ಎಂದರು.

'ಇಂಧನ ಬೆಲೆ ಇಳಿಕೆ ದೀಪಾವಳಿ ಉಡುಗೊರೆ ಎನ್ನುತ್ತಿದ್ದಾರೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, '10 ರೂ ಇರುವುದನ್ನು 5 ರೂ. ಮಾಡಿದಾಗ ಉಡುಗೊರೆ ಆಗುತ್ತದೆ. ಆದರೆ 40 ರೂ. ಕಿತ್ತುಕೊಂಡು ಈಗ 7 ರೂ. ಕೊಟ್ಟರೆ ಅದು ಉಡುಗೊರೆ ಹೇಗಾಗುತ್ತದೆ? ನಿಮಗೆ 20 ಸಾವಿರ ಸಂಬಳ ಇದ್ದಾಗ 25 ಸಾವಿರ ಕೊಟ್ಟರೆ ಅದು ಉಡುಗೊರೆ. 15 ಸಾವಿರ ಕಿತ್ತುಕೊಂಡು 5 ಸಾವಿರ ಕೊಟ್ಟರೆ ಅದು ಉಡುಗೊರೆನಾ? 50-60 ರೂ. ಇರಬೇಕಾದ ಇಂಧನ ಬೆಲೆ ಈಗ ಎಷ್ಟಿದೆ? ಇಷ್ಟು ದಿನ ಪಿಕ್ ಪಾಕೆಟ್ ಮಾಡಿದ್ದಾರೆ. ನೀವು ಸ್ಕೂಟರ್, ಕಾರ್ ಯಾವುದಾದರೂ ಸರಿ. ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ನರಸಿಂಹರಾವ್, ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಈಗಿನವರ ಅವಧಿಯಲ್ಲಿ ಕಚ್ಚಾತೈಲ ಬೆಲೆ ಎಷ್ಟಿತ್ತು, ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಾಳೆ ಮಾಡಿ ನೋಡಿ. ಕಚ್ಚಾತೈಲ ಬೆಲೆ ಇಳಿದಾಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರಾ?' ಎಂದು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News