×
Ad

ಗ್ರಾಮ ಪಂಚಾಯತ್ ನೌಕರರ ವೇತನ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚಿಸಿದ ಸರಕಾರ

Update: 2021-11-04 20:16 IST

ಬೆಂಗಳೂರು, ನ.4: ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಸಕಾಲದಲ್ಲಿ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಹೀಗಾಗಿ ಪಂಚಾಯತ್ ನೌಕರರ ಸಂಘಟನೆಗಳು ಪದೇಪದೇ ಮುಷ್ಕರ ನಡೆಸುತ್ತಿವೆ. ಇದನ್ನು ಗಂಬೀರವಾಗಿ ಪರಿಗಣಿಸಿದ ಸರಕಾರವು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವೇತನ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಪಂಚಾಯತ್ ರಾಜ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಆದೇಶ ಹೊರಡಿಸಿದೆ.

ಕೊರೋನ ಲಾಕ್‍ಡೌನ್‍ನಲ್ಲಿ ಪಂಚಾಯತ್ ಗಳು ತನ್ನ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುತ್ತಿರಲಿಲ್ಲ. ಕೊರೋನ ಲಾಕ್‍ಡೌನ್ ಮುಗಿದ ಬಳಿಕವು ಈ ಸಮಸ್ಯೆ ಹೀಗೆ ಮುಂದುವರೆಯುತ್ತಿದೆ. ಇದರಿಂದ ಪಂಚಾಯಿತಿಗಳಲ್ಲಿ ಹಲವಾರು ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದ್ದು, 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದೆ.

ಸಮಿತಿಯು 15ನೇ ಹಣಕಾಸು ಯೋಜನೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯ ಸೇವೆ ನೀಡುವವರಿಗೆ ಪಾವತಿಸಲು ಅನುದಾನ ಮೀಸಲಿಡಲಾಗಿದೆಯೇ ಎಂದು ಪರಿಶೀಲಿಸುವುದು ಸೇರಿದಂತೆ ಬಾಕಿ ಉಳಿದಿರುವ ವೇತನವನ್ನು ಕಡ್ಡಾಯವಾಗಿ ಸ್ವಂತ ಸಂಪನ್ಮೂಲದಿಂದ ಪಾವತಿಸಲು ಸಿಇಒಗಳಿಗೆ ಸೂಚಿಸುವುದು. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಗ್ರಾಪಂ ಸಿಬ್ಬಂದಿಗೆ ವೇತನ ಲಭ್ಯವಾಗುವಂತೆ ಕ್ರಮ ವಹಿಸುವುದು. ಗ್ರಾಮ ಪಂಚಾಯಿತಿಗಳು ವಸೂಲು ಮಾಡುವ ತೆರಿಗೆಯಲ್ಲಿ ಶೇ.40 ಹಣವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡುವುದು. 2006-07 ಸಾಲಿನಿಂದ ಎನ್‍ಆರ್‍ಇಜಿ ಡೇಟಾ ಎಂಟ್ರಿ ಆಪರೇಟರ್ಸ್ ಸೇವೆಯನ್ನು ಪರಿಶೀಲಿಸುವುದು. ಗ್ರಾಪಂ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕಾಗಿ ಸಹಾಯಧನ ನಿಗದಿಪಡಿಸುವುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು ಎಂದು ಅದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News