ಸರಕಾರಿ ನೌಕರರ ವಿರುದ್ಧ ಅನಾಮಧೇಯ ದೂರು ಅಸಿಂಧು
Update: 2021-11-04 21:08 IST
ಬೆಂಗಳೂರು, ನ.4: ರಾಜ್ಯದ ಸರಕಾರಿ ಅಧಿಕಾರಿಗಳ ವಿರುದ್ಧ ಮೂಗರ್ಜಿಗಳನ್ನು ಅಂದರೆ ಅನಾಮಧೇಯ ದೂರು ಪತ್ರಗಳನ್ನು ಮಾನ್ಯ ಮಾಡುವಂತಿಲ್ಲ ಎಂದು ಸರಕಾರವು ಆದೇಶ ಹೊರಡಿಸಿದೆ. ಹೀಗಾಗಿ ಇನ್ನು ಮುಂದೆ ಸರಕಾರಿ ನೌಕರರ ವಿರುದ್ಧ ದೂರು ದಾಖಲಿಸಬೇಕಾದರೆ, ದೂರುದಾರರು ವಿಳಾಸಸಹಿತವಾಗಿ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಿದೆ.
ಈ ಕುರಿತಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಮೂಗರ್ಜಿಗಳನ್ನು ಪರಿಗಣಿಸಬಾರದು. ವಿಳಾಸ ಇರುವ ದೂರುಗಳನ್ನ ಮಾತ್ರವೇ ಸ್ವೀಕರಿಸಬೇಕು. ಸೂಕ್ತ ದಾಖಲೆ ಇಲ್ಲದ ದೂರುಗಳನ್ನು ಪರಿಗಣಿಸಬಾರದು. ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ಮಾನ್ಯ ಮಾಡದಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಇನ್ಮುಂದೆ ವಿಳಾಸ, ಹೆಸರು ಇಲ್ಲದೇ ಯಾವುದೇ ಸರಕಾರಿ ಅಧಿಕಾರಿ, ನೌಕರರ ಮೇಲೆ ಅನಾಮಧೇಯ ಪತ್ರದಲ್ಲಿ ದೂರು ಕಳುಹಿಸಿದರೆ ಅದು ಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.