ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಶೀಘ್ರ ಅನುಮತಿಯ ನಿರೀಕ್ಷೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-11-04 16:09 GMT

ನ್ಯೂಯಾರ್ಕ್, ನ.3: ಭಾರತದಲ್ಲಿ ಉತ್ಪಾದಿಸಿರುವ ಕೊರೋನ ಸೋಂಕಿನ ವಿರುದ್ಧದ ಲಸಿಕೆ ‘ಕೊವ್ಯಾಕ್ಸಿನ್’ ಅನ್ನು ಮಕ್ಕಳಿಗೂ ಬಳಸುವುದಕ್ಕೆ ಅನುಮತಿ ನೀಡುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಭಾರತದಲ್ಲಿ ಜನವರಿ 6ರಿಂದ ಬಳಕೆಯಲ್ಲಿದ್ದರೂ ಇದರ ತುರ್ತುಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆತದ್ದು ನವೆಂಬರ್ 3ರಂದು. ತುರ್ತು ಬಳಕೆಯ ಪಟ್ಟಿಯಲ್ಲಿ ಸೇರ್ಪಡೆಗೆ ಅನುಮೋದನೆಗೂ ಮುನ್ನ ಕೆಲವೊಂದು ಹೆಚ್ಚುವರಿ ಮಾಹಿತಿಯ ಅಗತ್ಯವಿದೆ ಎಂದು ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು.

ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ಬಳಸಬೇಕಾದರೆ ಲಸಿಕೆ ಉತ್ಪಾದಕರು ಈ ಬಗ್ಗೆ ಅಂಕಿಅಂಶ ಒದಗಿಸಬೇಕು. ಆದರೆ ಮಕ್ಕಳಿಗೆ ಲಸಿಕೆಯನ್ನು ಬಳಿಸಿರುವ ಬಗ್ಗೆ ಭಾರತ್ ಬಯೊಟೆಕ್‌ನಿಂದ ಯಾವುದೇ ಮಾಹಿತಿ, ಅಂಕಿಅಂಶ ಇದುವರೆಗೆ ಲಭಿಸಿಲ್ಲ.

ಅಂಕಿಅಂಶ ಲಭಿಸಿದರೆ ಅನುಮೋದನೆ ಪ್ರಕ್ರಿಯೆ ಶೀಘ್ರದಲ್ಲಿ ಮುಂದುವರಿಯುತ್ತದೆ. ಎಂಆರ್‌ಎನ್‌ಎ ಲಸಿಕೆಯೂ ಮೊದಲು ವಯಸ್ಕರಿಗೆ ಅನುಮೋದನೆ ಪಡೆಯಿತು. ಬಳಿಕ ಯುವಕರಿಗೆ ಹಾಗೂ ಎಳೆಯರ ಬಳಕೆ ಬಗ್ಗೆ ಅಂಕಿಅಂಶ ಪೂರೈಸಿದ ಬಳಿಕ ಮಕ್ಕಳ ಬಳಕೆಗೆ ಅನುಮೋದನೆ ಪ್ರಕ್ರಿಯೆ ಮುಂದುವರಿದಿದೆ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಭಾರತದಲ್ಲಿ ಹಲವು ಗರ್ಭಿಣಿ ಮಹಿಳೆಯರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿದ್ದು ,ಈ ಬಗ್ಗೆ ಅಧ್ಯಯನ ನಡೆಸಿ ಅಂಕಿಅಂಶ ಒದಗಿಸಲು ಭಾರತ್ ಬಯೊಟೆಕ್ ಯೋಜನೆ ರೂಪಿಸಿದೆ. ಈ ಅಂಕಿಅಂಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ, ಯಾಕೆಂದರೆ ಗರ್ಭಿಣಿಯರಿಗೆ ಲಸಿಕೆ ನೀಡುವಾಗ ಗರ್ಭದಲ್ಲಿರುವ ಮಗು ಹಾಗೂ ತಾಯಿ ಇಬ್ಬರ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ಭಾರತದಲ್ಲಿ 2ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಬಳಕೆಗೆ ಕೊರೋನ ಲಸಿಕೆಯ ಕುರಿತ ತಜ್ಞರ ಸಮಿತಿಯು ಅಕ್ಟೋಬರ್‌ನಿಂದ ಅನುಮತಿ ನೀಡಿದೆ. ಈ ಲಸಿಕೆಯನ್ನು ಗರ್ಭಿಣಿ ಮಹಿಳೆಯರ ಬಳಕೆಯ ಕುರಿತು ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಅಂತಿಮ ಅನುಮೋದನೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News