ಕೋವಿಡ್ ಚಿಕಿತ್ಸೆಗೆ ಫೈಝರ್ ಮಾತ್ರೆ: ಶೀಘ್ರದಲ್ಲೇ ಅಮೆರಿಕದ ಎಫ್ ಡಿಎ ಅನುಮತಿ ನಿರೀಕ್ಷೆ

Update: 2021-11-06 17:24 GMT

ನ್ಯೂಯಾರ್ಕ್,ನ.6: ಕೋವಿಡ್ ಸೋಂಕಿನ ಚಿಕಿತ್ಸೆಗಾಗಿ ಮಾತ್ರೆಯನ್ನು ತಾನು ಪ್ರಾಯೋಗಿಕವಾಗಿ ಸಿದ್ಧಪಡಿಸಿದ್ದು, ಅದು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಅಪಾಯವಿರುವ ವಯಸ್ಕ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಹಾಗೂ ಸಾವನ್ನಪ್ಪುವ ಸಾಧ್ಯತೆಯನ್ನು ಶೇ.90ರಷ್ಟು ಕಡಿಮೆ ಮಾಡಲಿದೆಯೆಂದು ಅಮೆರಿಕದ ಖ್ಯಾತ ಔಷಧ ತಯಾರಕ ಸಂಸ್ಥೆ ಫೈಝರ್ ಶುಕ್ರವಾರ ಘೋಷಿಸಿದೆ.

ಅಮೆರಿಕದಲ್ಲಿ ಪ್ರಸಕ್ತ ಎಲ್ಲಾ ರೀತಿಯ ಕೋವಿಡ್19 ಚಿಕಿತ್ಸೆಗಾಗಿನ ಔಷಧಿಯನ್ನು ರನಾಡಿಗಳ ಮೂಲಕ ಅಥವಾ ಚುಚ್ಚು ಮದ್ದಿನ ಮೂಲಕ ನೀಡಲಾಗುತ್ತದೆ. ಕಾಂಪಿಟಿಟರ್‌ಮೆರ್ಕ್ಸ್ ಸಂಸ್ಥೆಯ ತಯಾರಿಸಿರುವ ಕೋವಿಡ್-19 ಮಾತ್ರೆಯು ಈಗಾಗಲೇ ಆಹಾರ ಹಾಗೂ ಔಷಧಿ ಇಲಾಖೆಯ ಪರಾಮರ್ಶೆಯಲ್ಲಿದೆ ಹಾಗೂ ಬ್ರಿಟನ್ ದೇಶವು ಇದಕ್ಕೆ ಅನುಮೋದನೆ ನೀಡಿದ ಪ್ರಪ್ರಥಮ ದೇಶವಾಗಿದೆ.

ಫೈಜರ್‌ಸಂಸ್ಥೆಯು ಶುಕ್ರವಾರ ಹೇಳಿಕೆಯೊಂದನ್ನ ನೀಡಿ ತನ್ನ ಕೋವಿಡ್19 ಮಾತ್ರೆಗೆ ಮಾನ್ಯತೆ ನೀಡುವಂತೆ ತಾನು ಎಲ್ಲಾ ಎಫ್‌ಡಿಎ ಹಾಗೂ ಅಂತಾರಾಷ್ಟ್ರೀಯ ಔಷಧ ನಿಯಂತ್ರಕ ಸಂಸ್ಥೆಗಳನ್ನು ಕೇಳಿಕೊಳ್ಳುವುದಾಗಿ ತಿಳಿಸಿದೆ.

ಫೈಝರ್ ಅರ್ಜಿಯನ್ನು ಸಲ್ಲಿಸಿದ ಬಳಿಕ ಎಫ್‌ಡಿಎ ಈ ಬಗ್ಗೆ ಕೆಲವು ವಾರಗಳು ಹಾಗೂ ತಿಂಗಳುಗಳೊಳಗೆ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್19 ರೋಗಲಕ್ಷಣಗಳನ್ನು ಗಣನೀಯವಾಗಿ ಕಡಿಮೆಗೊಳಿಸಬಲ್ಲಂತಹ ಹಾಗೂ ರೋಗಿಗಳ ಶೀಘ್ರಚೇತರಿಕೆಗೆ ಮಾತ್ರೆಯನ್ನು ಕಂಡುಹಿಡಿಯುವುದಕ್ಕಾಗಿ ಜಗತ್ತಿನಾದ್ಯಂತ ಸಂಶೋಧಕರು ಪೈಪೋಟಿ ನಡೆಸುತ್ತಿದ್ದಾರೆ.

ಫೈಝರ್ ಕಂಪೆನಿಯು 775 ವಯಸ್ಕರ ಮೇಲೆ ಈ ಮಾತ್ರೆಯನ್ನು ಪರೀಕ್ಷಿಸಿತ್ತು. ಈ ಮಾತ್ರೆಯನ್ನು ಸೇವಿಸಿದ ರೋಗಿಗಳಲ್ಲಿ ಕೋವಿಡ್19 ರೋಗಲಕ್ಷಣಗಳಲ್ಲಿ ಶೇ.89ರಷ್ಟು ಇಳಿಕೆಯಾಗಿದೆ. ಶೇ.1ಕ್ಕಿಂತಲೂ ಕಡಿಮೆ ಸಂಖ್ಯೆಯ ರೋಗಿಗಳು ಮಾತ್ರವೇ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು ಮತ್ತು ಯಾರೂ ಕೂಡಾ ಸಾವನ್ನಪ್ಪಿಲ್ಲವೆಂದು ಕಂಪೆನಿಯ ಮೂಲಗಳು ತಿಳಿಸಿದೆ.

ಈ ಮಾತ್ರೆಯನ್ನು ಸೇವಿಸದೆ ಇರುವಂತಹ ತುಲನಾತ್ಮಕ ಗುಂಪಿನವರಲ್ಲಿ ಶೇ.7ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಏಳು ಮಂದಿ ಸಾವನ್ನಪ್ಪಿದ್ದರು ಎಂದು ಫೈಝರ್‌ನ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಮೈಕೆಲ್ ಡೊಲ್‌ಸ್ಟೆನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News