ಮೈಸೂರು: ಉಪನ್ಯಾಸಕರು ಕರ್ತವ್ಯದ ವೇಳೆ ಟಿ-ಶರ್ಟ್, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ; ವಿವಾದದ ಬಳಿಕ ಆದೇಶ ವಾಪಸ್

Update: 2021-11-07 13:31 GMT
ಡಿಡಿಪಿಯು ಡಿ.ಕೆ.ಶ್ರೀನಿವಾಸ ಮೂರ್ತಿ

ಮೈಸೂರು,ನ.7: ಮೈಸೂರು ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರು ಕರ್ತವ್ಯದ ವೇಳೆಯಲ್ಲಿ ಟಿ.ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದ ಡಿಡಿಪಿಯು ಡಿ.ಕೆ.ಶ್ರೀನಿವಾಸ ಮೂರ್ತಿ ತಮ್ಮ ಸಹೋದ್ಯೋಗಿ ವಲಯದಲ್ಲೇ ಅಪಸ್ವರ ಬಂದ ಕಾರಣ ತಕ್ಷಣ ಆದೇಶವನ್ನು ಹಿಂಪಡೆದಿದ್ದಾರೆ.

ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಕಾಲೇಜು ಉಪನಿರ್ದೇಶಕ ಡಿ.ಕೆ.ಶ್ರೀನಿವಾಸಮೂರ್ತಿ ಕೆಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ದೂರನ್ನು ಆಲಿಸಿ ನ.6 ಶನಿವಾರ ಸಂಜೆ ಜಿಲ್ಲೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕರ್ತವ್ಯದ ವೇಳೆ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಇದರಿಂದ ಸಹೋದ್ಯೋಗಿ ವಲಯದಲ್ಲೇ ಅಪಸ್ವರ ಕೇಳಿ ಬಂದ ಹಿನ್ನಲೆಯಲ್ಲಿ ಒಂದು ಗಂಟೆಯಲ್ಲೇ ತಮ್ಮ ಆದೇಶವನ್ನು ಹಿಂಪಡೆದರು.

ಈ ಕುರಿತು “ವಾರ್ತಾಭಾರತಿ” ಯೊಂದಿಗೆ ಮಾತನಾಡಿದ ಡಿಡಿಪಿಯು ಡಿ.ಕೆ.ಶ್ರೀನಿವಾಸಮೂರ್ತಿ, 'ಸರ್ಕಾರದ ಯಾವುದೇ ಆದೇಶ ಇರಲಿಲ್ಲ, ಆದರೆ ಕೆಲವು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಉಪನ್ಯಾಸಕರು ಕಾಲೇಜಿಗೆ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸು ಬರುತ್ತಾರೆ. ಇದರಿಂದ ಉಪನ್ಯಾಸಕರು ಎಂಬ ಗೌರವ ಮೂಡುವುದಿಲ್ಲ, ಕೆಲವೊಮ್ಮೆ ಉಪನ್ಯಾಸಕರನ್ನೇ ಸಾರ್ವಜನಿಕರು ವಿದ್ಯಾರ್ಥಿಗಳು ಎಂದು ಭಾವಿಸುವುದುಂಟು ಹಾಗಾಗಿ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸದಂತೆ ಸೂಚಿಸಿ ಎಂದು ನಾನು ಭೇಟಿ ನೀಡಿದ ಕಡೆಗಳಲ್ಲಿ ಹೇಳುತ್ತಿದ್ದರು. ಇದರಿಂದ ನಾನೇ ಆದೇಶ ಹೊರಡಿಸಿದ್ದೆ. ಇದು ವಿವಾದ ಉಂಟು ಮಾಡಲಿದೆ ಎಂಬುದನ್ನು ಅರಿತು ತಕ್ಷಣ ಆದೇಶ ಹಿಂಪಡೆದಿದ್ದೇನೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಕಾರಣ ಕೇಳಿದ್ದು ಅವರಿಗೆ ಉತ್ತರಿಸಲಿದ್ದೇನೆ' ಎಂದು ಹೇಳಿದರು.

ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಟೀ-ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸುಂತಿಲ್ಲ ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.

ನಾನು ಈ ರೀತಿಯ ಆದೇಶ ಹೊರಡಿಸಿಲ್ಲ. ಈ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಯೊಂದಿಗೆ ಮಾತನಾಡಿ, ಆದೇಶವನ್ನು ಹಿಂಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ವಿಷಯವನ್ನು ಗಮನಕ್ಕೆ ತರದೇ ಆದೇಶ ಹೊರಡಿಸಿರುವ ಬಗ್ಗೆ ಡಿಡಿಪಿಯು ಅವರಿಂದ ಸೂಕ್ತ ಕಾರಣ ಕೇಳಿದ್ದೇನೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News