ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಚ್ಚಬೇಡಿ: ಸಿಎಂ, ಹಿಂದುಳಿದ ವರ್ಗಗಳ ಸಚಿವರಿಗೆ ಪ್ರಿಯಾಂಕ್ ಖರ್ಗೆ ಪತ್ರ

Update: 2021-11-07 14:01 GMT
ಪ್ರಿಯಾಂಕ್ ಖರ್ಗೆ 

ಬೆಂಗಳೂರು, ನ. 7: `ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ 29 ವರ್ಷಗಳ ಹಿಂದೆ ಆರಂಭವಾಗಿದ್ದ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬೇಡಿ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಉಭಯ ನಾಯಕರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು, `ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ 1993ರಲ್ಲಿ ದೇವರಾಜು ಅರಸು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯು ಹಿಂದುಳಿದ ಜನಾಂಗಗಳ ಬಗ್ಗೆ ಅಧ್ಯಯನ ನಡೆಸಿ ಕಾರ್ಯಗಾರವನ್ನು ನಡೆಸುತ್ತಿದೆ. ಸಂಸ್ಥೆಯು ನಡೆಸುವ ಸಮೀಕ್ಷೆ ಹಾಗೂ ವರ್ಗಗಳ ಸ್ಥಿತಿಗತಿಯ ಅಧ್ಯಯನದ ವರದಿಯಿಂದ ಹಿಂದುಳಿದ ವರ್ಗಗಳ ಉನ್ನತಿಗೆ ಹೊಸ ಯೋಜನೆ ರೂಪಿಸಲು ಸರಕಾರಕ್ಕೆ ಅನುಕೂಲವಾಗಿರುತ್ತದೆ.

ಇಂತಹ ಸಂಸ್ಥೆ ಮುಚ್ಚುವುದರಿಂದ ಹಿಂದುಳಿದ ಸಮುದಾಯಗಳ ಕುಲ ಶಾಸ್ತ್ರೀಯ ಅಧ್ಯಯನ ಮತ್ತು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿ, ಔದ್ಯೋಗಿಕ ಹಾಗೂ ಆರ್ಥೀಕ ಸ್ಥಿತಿಗತಿಗಳ ಅಧ್ಯಯನ ಮೇಲೆ ಪರಿಣಾಮ ಬೀರಲಿದ್ದು, ಸಮುದಾಯಗಳು ಸಬಲೀಕರಣಗೊಳ್ಳದೇ ಹಿಂದುಳಿಯಲು ಸರಕಾರವೇ ನೇರ ಕಾರಣವಾಗುತ್ತದೆ. ಆದುದರಿಂದ ಈ ಸಂಸ್ಥೆಯನ್ನು ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು' ಎಂದು ಆಗ್ರಹಿಸಿದ್ದಾರೆ. 

`ಈ ಸಂಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಹಿಂದುಳಿದ ವರ್ಗದ ಮಹಿಳೆಯರ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾಮ ಮತ್ತು ಶೈಕ್ಷಣಿಕ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವ ಮೂಲಕ ನೂತನ ಕ್ರಮಗಳನ್ನು ಕೈಗೊಂಡು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಗಮನಹರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

`ಬಿಜೆಪಿಯ ಆಡಳಿತ ವೈಖರಿ `ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ' ಎನ್ನುವಂತಿದೆ. ಮೊನ್ನೆ ಉಪಚುನಾವಣೆ ಸಂದರ್ಭದಲ್ಲಿ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಅದೇ ಕಂಬಳಿಯ ಮರೆಯಲ್ಲಿ 29 ವರ್ಷಗಳ ಹಿಂದೆ ಸ್ಥಾಪಿಸಿದ್ದ `ದೇವರಾಜ ಅರಸು ಸಂಶೋಧನಾ ಸಂಸ್ಥೆ'ಯನ್ನೇ ಮುಚ್ಚಲು ಮುಂದಾಗಿದ್ದಾರೆ. ಬಹುಶಃ ಮುಖ್ಯಮಂತ್ರಿಯಾಗಿ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಈ ಕೊಡುಗೆ ನೀಡಿದ್ದಾರೆ ಎನಿಸುತ್ತಿದೆ. ಹಿಂದುಳಿದವರ ಅಭಿವೃದ್ಧಿಗೆ ಸ್ಥಾಪಿಸಿದ್ದ ಸಂಸ್ಥೆಯನ್ನು ನಿರ್ನಾಮ ಮಾಡುವ ಮೂಲಕ ಹಿಂದುಳಿದ ಜನರ ಬೆನ್ನಿಗೆ ಬಿಜೆಪಿ ಸರಕಾರ ಚೂರಿ ಇರಿದಿದೆ. ಈ ಮೂಲಕ ಬಿಜೆಪಿ ಪಕ್ಷವು, ಹಿಂದುಳಿದ ವರ್ಗಗಳ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ'

-ಪ್ರಿಯಾಂಕ್ ಖರ್ಗೆ- ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News