‘ನೀಟ್’ನಲ್ಲಿ ಸಾಧನೆಗೈದ ರೇಖಾ'ರ ಸಂಪೂರ್ಣ ವೈದ್ಯಕೀಯ ಶಿಕ್ಷಣದ ಖರ್ಚನ್ನು ಭರಿಸಲು ಮುಂದಾದ ಡಾ ಅಬ್ದುಲ್ ಖದೀರ್

Update: 2021-11-08 11:57 GMT

ಬೀದರ್: ಮೂರು ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಆಘಾತದ ನಡುವೆಯೇ ನೀಟ್‍ನಲ್ಲಿ ಸಾಧನೆಗೈದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ರೇಖಾ ಅಡೂರ ಅವರ ವೈದ್ಯಕೀಯ ಕೋರ್ಸ್ ಶುಲ್ಕ ಭರಿಸಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಮುಂದಾಗಿದೆ.

ಬೀದರ್ ನ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೇಖಾ ಅವರನ್ನು ಸನ್ಮಾನಿಸಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು, ನೆರವಿನ ಅಭಯ ನೀಡಿದರು.

ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿನಿಯ ಐದು ವರ್ಷಗಳ ವೈದ್ಯಕೀಯ ಕೋರ್ಸ್‍ನ ಶುಲ್ಕ ಭರಿಸಲಾಗುವುದು. ಅಗತ್ಯವಾದರೆ ಹಾಸ್ಟೇಲ್ ಶುಲ್ಕ ಕಟ್ಟಲು ಸಹ ಸಿದ್ಧ ಎಂದು ಪ್ರಕಟಿಸಿದರು. ಸ್ಥಳದಲ್ಲೇ ವಿದ್ಯಾರ್ಥಿನಿಗೆ ವೈದ್ಯಕೀಯ ಕೋರ್ಸ್‍ನ ಮೊದಲ ವರ್ಷದ ಶುಲ್ಕದ ರೂ. 60 ಸಾವಿರದ ಚೆಕ್ ನೀಡಿದರು.

ಆರ್ಥಿಕ ಸಮಸ್ಯೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಬಾರದು. ದಾನಿಗಳು, ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಕನಸು ಸಾಕಾರಗೊಳಿಸಿದ ಶಾಹೀನ್: 'ನಾನು ವೈದ್ಯೆಯಾಗಬೇಕು ಎಂದು ನನ್ನ ತಂದೆ-ತಾಯಿ ಹೊತ್ತಿದ್ದ ಕನಸನ್ನು ಶಾಹೀನ್ ಸಾಕಾರಗೊಳಿಸಿದೆ. ಆದರೆ, ಅದನ್ನು ನೋಡಲು ಈಗ ಅವರೇ ಇಲ್ಲ' ಎಂದು ವಿದ್ಯಾರ್ಥಿನಿ ರೇಖಾ ಭಾವುಕರಾಗಿ ನುಡಿದರು.

ಪಿಯುಸಿ ಶಿಕ್ಷಣ ಶಾಹೀನ್‍ನಲ್ಲೇ ಪಡೆದಿದ್ದೇನೆ. 2020ನೇ ಸಾಲಿನ ನೀಟ್‍ನಲ್ಲಿ 391 ಅಂಕ ಬಂದ ಕಾರಣ ವೈದ್ಯಕೀಯ ಸೀಟು ಲಭಿಸಿರಲಿಲ್ಲ. ಹೀಗಾಗಿ ಶಾಹೀನ್‍ನಲ್ಲಿ ಮತ್ತೆ ನೀಟ್ ತರಬೇತಿ ಪಡೆದೆ. ಎರಡನೇ ಪ್ರಯತ್ನದಲ್ಲಿ 591 ಅಂಕಗಳು ದೊರಕಿದ್ದು, 22,883ನೇ ರ್ಯಾಂಕ್ ಬಂದಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗಲಿದೆ ಎಂದು ತಿಳಿಸಿದರು.

ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ತಾಯಿ ರಾಜೇಶ್ವರಿ ಏಪ್ರಿಲ್ 22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖ್ಯ ಶಿಕ್ಷಕರಾಗಿದ್ದ ತಂದೆ ಸಿದ್ದಪ್ಪ ಜುಲೈ 30 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ನೀಟ್ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ತಂದೆ-ತಾಯಿ ಸಾವು ಆಘಾತ ಉಂಟು ಮಾಡಿತ್ತು. ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಗಿತ್ತು. ಬಹಳ ದಿನಗಳವರೆಗೆ ದುಃಖದಿಂದ ಹೊರಬರಲು ಆಗಿರಲಿಲ್ಲ ಎಂದು ಹೇಳಿದರು.

ಡಾ. ಅಬ್ದುಲ್ ಖದೀರ್ ಹಾಗೂ ಕಾಲೇಜು ಉಪನ್ಯಾಸಕರು ಸಮಾಧಾನ ಹೇಳಿ, ಆತ್ಮವಿಶ್ವಾಸ ತುಂಬಿದರು. ಕಾಲೇಜಿನಲ್ಲಿರುವ ಉತ್ತಮ ಶೈಕ್ಷಣಿಕ ವಾತಾವರಣದಿಂದಾಗಿಯೇ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಗಳಿಸಲು ಸಾಧ್ಯವಾಯಿತು. ಈಗ ವೈದ್ಯಕೀಯ ಶಿಕ್ಷಣಕ್ಕೂ ನೆರವಾಗುತ್ತಿರುವುದಕ್ಕೆ ಶಾಹೀನ್‍ಗೆ ಕೃತಜ್ಞಳಾಗಿದ್ದೇನೆ ಎಂದು ಹೇಳಿದರು.

ತಂದೆ-ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯ ಬಲಹೀನವಾಗಿದ್ದರಿಂದಲೇ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಹೃದಯವನ್ನು ನೋಡಬೇಕಾಗಿದೆ. ಹೀಗಾಗಿ ಹೃದಯ ರೋಗ ತಜ್ಞೆಯಾಗುವ ಬಯಕೆ ಇದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News