ಕಡೂರು: ಜಮ್ಮುವಿನಲ್ಲಿ ಮೃತಪಟ್ಟ ಯೋಧನಿಗೆ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

Update: 2021-11-08 14:07 GMT

ಕಡೂರು, ನ.8: ಜಮ್ಮು ಗಡಿ ಭದ್ರತಾ ಪಡೆಯ ಮೆಕ್ಯಾನಿಕಲ್ ವಿಭಾಗದಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಡೆದ ಆಕಸ್ಮಿಕ ಘಟನೆಯಲ್ಲಿ ಮೃತಪಟ್ಟಿದ್ದ ತಾಲೂಕಿನ ಬಿಳುವಾಲ ಗ್ರಾಮದ ಯೋಧ ಬಿ.ಕೆ.ಶೇಷಪ್ಪ(45) ಅವರ ಮೃತದೇಹವನ್ನು ಸೋಮವಾರ ಪಟ್ಟಣಕ್ಕೆ ತರಲಾಗಿದ್ದು, ಈ ವೇಳೆ ಯೋಧನ ಪಾರ್ಥಿವ ಶರೀರವನ್ನು  ಪಟ್ಟಣದ ಮುಖ್ಯ ರಸ್ಥೆಗಳಲ್ಲಿ ಮೆರವಣಿಗೆ ಮಾಡಿ ಗೌರವಿಸಲಾಯಿತು.

ಮೆರವಣಿಗೆ ಬಳಿಕ ಬಿಳುವಾಲ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು. ಯೋಧ ಶೇಷಪ್ಪ ಅವರ ಸೇವಾ ಅವಧಿಯು 2021ರ ಜನವರಿವರೆಗೆ ಇದ್ದು, ಕಳೆದ ಶನಿವಾರ ಜಮ್ಮು ಸೇನಾ ವಿಭಾಗದಲ್ಲಿ ವಾಹನವೊಂದರ ದುರಸ್ತಿ ವೇಳೆ ಜಾಕ್ ಕುಸಿದು ಶೇಷಪ್ಪ ಅವರ ಮೇಲೆ ಬಿದ್ದ ಪರಿಣಾಮ ಅವರ ತಲೆಗೆ ಪೆಟ್ಟು ಬಿದ್ದು ಕೋಮಾ ಸ್ಥಿತಿಗೆ ತೆರಳಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಯೋಧ ಶೇಷಪ್ಪ ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮಾಜಿ ಶಾಸಕ ವೈಎಸ್‍ವಿ ದತ್ತ, ಶಾಸಕ ಬೆಳ್ಳಿ ಪ್ರಕಾಶ್, ವಿಧಾನಪರಿಷತ್  ಉಪಸಭಾಪತಿ  ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಮಚ್ಚಿಂದ್ರ, ಕೆ.ಪಿ.ಸಿ.ಸಿ.ಸದಸ್ಯ ಕೆ.ಎಸ್.ಆನಂದ್, ತಾಲೂಕು ಆಡಳಿತ ಸೇರಿದಂತೆ ಸಾರ್ವಜನಿಕರು ಮೃತ ಯೋಧನ ಅಂತಿಮ ದರ್ಶನ ಪಡೆದು ಗೌರವ ಸಮರ್ಪಣೆ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News