ಅಧಿಕಾರಿಗಳು ತಪ್ಪದೇ ವಿಚಾರಣೆಗೆ ಹಾಜರಾಗಬೇಕೆಂಬ ಸುತ್ತೋಲೆ ಹೊರಡಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ನ.8: ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿದ್ದಾಗ ಅಧಿಕಾರಿಗಳು ತಪ್ಪದೇ ಹಾಜರಾಗುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ನಗರ ಮತ್ತು ಗ್ರಾಮೀಣ ಭಾಗದ ವಸತಿ ರಹಿತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹೌಸಿಂಗ್ ಫಾರ್ ಆಲ್ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ನಗರದ ವಕೀಲ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸೆ.15ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಹಲವು ಬಾರಿ ಸೂಚಿಸಿದ್ದರೂ ಪಿಐಎಲ್‍ಗೆ ಆಕ್ಷೇಪಣೆ ಸಲ್ಲಿಸದ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೆಯೇ, ಸರಕಾರ ಮುಂದಿನ ವಿಚಾರಣೆ ಒಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ವಿಚಾರಣೆ ವೇಳೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿತ್ತು.
ಆದರೆ, ವಸತಿ ಇಲಾಖೆ ಪಿಐಎಲ್‍ಗೆ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಜತೆಗೆ ಇಂದಿನ ವಿಚಾರಣೆಗೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಹಾಜರಾಗಿರಲಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಇಷ್ಟು ಹಗುರವಾಗಿ ಪರಿಗಣಿಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ.
ಕೋರ್ಟ್ ನಿರ್ದೇಶಗಳನ್ನು ಅಧಿಕಾರಿಗಳು ಪಾಲಿಸಬೇಕು. ಈ ಬಗ್ಗೆ ಅವರಿಗೆ ಅರ್ಥವಾಗಿಲ್ಲದಿದ್ದರೆ ಅರ್ಥ ಮಾಡಿಸುವುದು ನಮಗೆ ಗೊತ್ತಿದೆ. ಹಾಗೆಯೇ, ಅಧಿಕಾರಿಗಳು ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಿಗೆ ಆದೇಶಿಸಬೇಕಾಗುತ್ತದೆ. ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಕರೆಸಬೇಕೆಂಬ ಉದ್ದೇಶವೇ ನಮಗಿರುವುದಿಲ್ಲ. ಈ ರೀತಿ ನಡೆದುಕೊಂಡಾಗ ಕರೆಸಲೇಬೇಕಾಗುತ್ತದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ನ್ಯಾಯಾಲಯದ ಆದೇಶ, ಸೂಚನೆಗಳಿದ್ದಾಗ ಅಧಿಕಾರಿಗಳು ಯಾವುದೇ ಕಾರಣ, ನೆಪಗಳನ್ನು ನೀಡಿ ವಿಚಾರಣೆಗೆ ತಪ್ಪಿಸಿಕೊಳ್ಳಬಾರದು. ಈ ಕುರಿತು ಸೂಕ್ತ ಸುತ್ತೋಲೆ ಹೊರಡಿಸಿ ಎಂದು ಸರಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.