×
Ad

ಬಿಟ್ ಕಾಯಿನ್ ಪ್ರಕರಣ; ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ: ಸಚಿವ ಈಶ್ವರಪ್ಪ

Update: 2021-11-08 20:00 IST

ಬೆಂಗಳೂರು, ನ. 8: ‘ಬಿಟ್ ಕಾಯಿನ್ ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು ತನಿಖೆಯ ಬಳಿಕ ಸತ್ಯಾಂಶ ಬಹಿರಂಗವಾಗಲಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಗೊತ್ತಾಗಲಿದೆ. ತನಿಖೆ ಆಗುವವರೆಗೂ ಎಲ್ಲರೂ ಮೌನವಾಗಿರಬೇಕು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಆ ಪಕ್ಷ, ಈ ಪಕ್ಷ ಎಂದು ಹೇಳುವುದು ಸರಿಯಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು ಊಹೆ ಮಾಡುವುದು ಒಳ್ಳೆಯದಲ್ಲ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಅಲ್ಲಿಯವರೆಗೆ ಎಲ್ಲರೂ ಕಾಯಬೇಕು ಎಂದು ಸಲಹೆ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆ ಮಾಡಲಾಗುತ್ತದೆ ಎಂಬುದು ಕತ್ತಲಲ್ಲಿ ಕರಿ ಬೆಕ್ಕು ಹುಡುಕಿದ ಹಾಗೆ. ಆದರೆ ಕತ್ತಲಲ್ಲಿ ಬೆಕ್ಕು ಕೂಡ ಇಲ್ಲ. ಸುಮ್ಮನೇ ಆ ರೀತಿ ಯಾರೂ ಹೇಳಬಾರದು. ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲ್ ಬದಲಾವಣೆ ಮಾಡುವುದಿಲ್ಲ. ಅವರು ರಾಜ್ಯಾದ್ಯಂತ ಸಂಚಾರ ಮಾಡಿ ಉತ್ತಮ ಕೆಲಸ ಮಾಡುತ್ತಿದ್ದು, ಬದಲಾವಣೆ ಪ್ರಶ್ನೆ ಇಲ್ಲ ಎಂದು ಈಶ್ವರಪ್ಪ ನುಡಿದರು.

ಯೋಜನೆ ಅನುಷ್ಠಾನ ನಿಶ್ಚಿತ: ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ. ಕಾನೂನು, ರೀತಿ-ನೀತಿಗಳನ್ನು ನೋಡಿಕೊಂಡು ಸರಕಾರ ಮುಂದಿನ ಕ್ರಮ ವಹಿಸಲಿದೆ. ಆದರೆ, ಕಾಂಗ್ರೆಸ್‍ನವರ ಪಾದಯಾತ್ರೆ ಮಾಡುತ್ತಾರೆಂದರೆ ಬೇಡ ಎನ್ನಲು ಆಗುವುದಿಲ್ಲ. ಮಾಡ್ಲಿ ಬಿಡಿ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News