×
Ad

ಬಿಜೆಪಿಯವರಂತಹ ಜಾತಿವಾದಿಗಳು ಬೇರೆ ಯಾರೂ ಇಲ್ಲ: ಸಿದ್ದರಾಮಯ್ಯ ತಿರುಗೇಟು

Update: 2021-11-08 20:15 IST

ಮಂಡ್ಯ, ನ.8: ನಾನು ಜಾತಿ ಮಾಡುತ್ತೇನೆಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಬೇರೆ ಯಾರೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸೋಮವಾರ ಜಿಲ್ಲಾ ಕರುಬರ ಸಂಘ ಆಯೋಜಿಸಿದ್ದ ವರಸಿದ್ದಿ ವಿನಾಯಕ ದೇವಾಲಯ ಲೋಕಾರ್ಪಣೆ ಹಾಗು ಅತಿಥಿಗೃಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಕೃತಿ ದಹನ ಮಾಡುವುದರಿಂದ ನಾನಾಗಲೀ, ನನ್ನ ಜನವಾಗಲೀ, ನನ್ನ ಪ್ರೀತಿಸುವ ಅಭಿಮಾನಿಗಳು ಯಾರೂ ಸುಟ್ಟುಹೋಗುವುದಿಲ್ಲ. ನನ್ನನ್ನು ಸಮಾಜದ ಎಲ್ಲಾ ಬಡವರು ಪ್ರೀತಿಸುತ್ತಾರೆ ಎಂದರು.

ನಾನು ಯಾವತ್ತೂ ಜಾತಿ ಮಾಡುವುದಿಲ್ಲ. ನನ್ನ ಯೋಜನೆಗಳೆಲ್ಲವೂ ಎಲ್ಲಾ ಜನರ ಪರವಾಗಿವೆ. ಕಿತ್ತೂರು ರಾಣಿ ಚನ್ನಮ್ಮ, ದೇವರ ದಾಸಿಮಯ್ಯ, ಟಿಪ್ಪು ಸುಲ್ತಾನ್, ಕನಕ, ಭಗೀರಥ, ಅಂಬಿಗರ ಚೌಡಯ್ಯ, ಮುಂತಾದವರ ಜಯಂತಿ ಮಾಡಿದವನು ನಾನೇ.  ಆದರೂ ಸಿದ್ದರಾಮಯ್ಯ ಜಾತಿ ವಾದಿ ಅನ್ನುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ದೇವರಾಜು ಅರಸು ನಂತರ ಐದು ವರ್ಷ ಮುಖ್ಯಮಂತ್ರಿಯಾಗಿ ಬಡವರ, ಶೋಷಿತರ, ಎಲ್ಲಾ ಜನರ ಪರವಾದ ಸರಕಾರ ಕೊಟ್ಟಿದ್ದನ್ನು ಸಹಿಸಿಕೊಳ್ಳಲಾಗದೆ ಹೊಟ್ಟೆಕಿಚ್ಚಿಗೋಸ್ಕರ ಬಿಜೆಪಿಯವರು ಸುಖಾಸುಮ್ಮನೆ ನನ್ನ ಮೇಲೆ ಜಾತಿವಾದಿಯೆಂಬ ಗೂಬೆ ಕೂರಿಸುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ನನಗೇನೂ ಆಗುವುದಿಲ್ಲ, ಅವರಿಗೇ ತೊಂದರೆ ಆಗುವುದು ಎಂದು ಅವರು ವ್ಯಂಗ್ಯವಾಡಿದರು.

ಬಡವರಿಗೆ 7 ಕೆಜಿ ಅಕ್ಕಿ ಕೊಟ್ಟೆ, ಹಾಲಿಗೆ 5 ರೂ. ನೀಡಿದೆ, ರೈತರ ಸಾಲಮನ್ನಾ ಮಾಡಿದೆ, ಬಡ್ಡಿರಹಿತ ಸಾಲ ಕೊಟ್ಟೆ, ಕೃಷಿ ಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ ಮಾಡಿದೆ. ಸಮಾಜದ ಹಿಂದುಳಿದವರೆಲ್ಲರೂ ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ, ಈಗ ಇವರು(ಬಿಜೆಪಿ) ಬಂದು ಎಲ್ಲವನ್ನೂ ನಿಲ್ಲಿಸಿಬಿಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿದ್ದಾರಾ? ಬಡವರಿಗೆ ಮನೆ ಕೊಟ್ಟಿದ್ದಾರ? ಎಂದು ಅವರು ತರಾಟೆಗೆ ತೆಗೆದುಕೊಂಡರು.

ಎಲ್ಲಾ ಹಿಂದುಳಿದ ಜಾತಿಗಳಿಗೆ ರಾಜಕೀಯ ನಾಯಕತ್ವ ದೊರೆತರೆ ಮಾತ್ರ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಸರಕಾರ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಕೊಟ್ಟಿತು. ಅದರ ಫಲವಾಗಿ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರು ಸ್ಥಾನಪಡೆದಿದ್ದಾರೆ ಎಂದು ಅವರು ಹೇಳಿದರು.

ಸಮಸಮಾಜ ನಿರ್ಮಾಣವಾಗಬೇಕು. ಹಳ್ಳಿಗಾಡಿನ ಮಕ್ಕಳೆಲ್ಲರೂ ವಿದ್ಯಾವಂತರಾಗಬೇಕು. ಐಎಎಸ್, ಐಪಿಎಸ್, ಕೆಎಎಸ್‍ನಂತಹ ಹುದ್ದೆ ಅಲಂಕಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಪ್ರತಿ ಹೋಬಳಿಯಲ್ಲಿ ವಸತಿ ಶಾಲೆ, ಹಾಸ್ಟೆಲ್ ಆರಂಭಿಸಿದೆ ಎಂದು ಅವರು ವಿವರಿಸಿದರು.

ಇನ್ನೊಬ್ಬರಿಗೆ ಕೇಡನ್ನು ಬಯಸದೆ ಪ್ರತಿಯೊಬ್ಬರನ್ನೂ ಪ್ರೀತಿಸುವುದೇ ನಿಜವಾದ ಧರ್ಮ. ದಲಿತ, ಹಿಂದುಳಿದವ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಬುದ್ದ, ಬಸವಣ್ಣ, ಅಂಬೇಡ್ಕರ್, ಕನಕದಾಸ, ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಸಮಾನತೆಯ ಕನಸು ನನಸಾಗಬೇಕು. ಆ ನಿಟ್ಟಿನಲ್ಲಿ ಹೋರಾಡಬೇಕು ಎಂದು ಅವರು ಕರೆ ನೀಡಿದರು.

ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ,  ಮಾಜಿ ಶಾಸಕರಾದ ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ಕುರುಬರ ಸಂಘದ ಪದಾಧಿಕಾರಿಗಳು ಹಾಗು ಮುಂಖಂಡರು ಉಪಸ್ಥಿತರಿದ್ದರು.

“ಇವತ್ತು ಕಾಂಗ್ರೆಸ್ ಪರವಾದ ಗಾಳಿ ಬೀಸುವ ವಾತಾವರಣ ಪ್ರಾರಂಭವಾಗಿದೆ. ಜನಪರ ಕಾರ್ಯಕ್ರಮಗಳಿಗಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕಾಗಿದೆ. ಕಾಂಗ್ರೆಸ್ ಗೆಲ್ಲಿಸಿ. ಬುರುಡೆ ಬಿಡುವವರ ಬಗ್ಗೆ ಎಚ್ಚಕೆಯಿಂದ ಇರಿ.”

- ಸಿದ್ದರಾಮಯ್ಯ, ವಿಪಕ್ಷ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News