×
Ad

ಎರಡು ತಿಂಗಳಲ್ಲಿ ಪೂರ್ಣಪ್ರಮಾಣದ ಐಬಿಎಂ ಮೈಸೂರು ಕ್ಯಾಂಪಸ್ ಆರಂಭ: ಡಾ.ಅಶ್ವತ್ಥನಾರಾಯಣ

Update: 2021-11-08 22:07 IST

ಬೆಂಗಳೂರು, ನ.8: ಸಾಫ್ಟ್‍ವೇರ್ ಎಂಜಿನಿಯರಿಂಗ್, ವಿನ್ಯಾಸ ಮತ್ತು ಅನಲಿಟಿಕ್ಸ್‍ಗಳಲ್ಲಿ ಪರಿಣತಿ ಹೊಂದಿರುವ ಐಬಿಎಂ ಸಮೂಹದ `ಕ್ಲೈಯಂಟ್ ಇನ್ನೋವೇಶನ್ ಸೆಂಟರ್’ಗೆ (ಸಿಐಸಿ) ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿದರು. 

ವಿಕಾಸಸೌಧದಲ್ಲಿ ಈ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಈ ಅತ್ಯಾಧುನಿಕ ಕೇಂದ್ರವು ಮೈಸೂರಿನಿಂದ ತನ್ನ ಚಟುವಟಿಕೆಗಳನ್ನು ನಡೆಸಲಿದ್ದು, ಎರಡು ತಿಂಗಳಲ್ಲಿ ಐಬಿಎಂ ಸಮೂಹವು ಮೈಸೂರಿನಲ್ಲೂ ತನ್ನ ಕಚೇರಿಯನ್ನು ಆರಂಭಿಸಲಿದೆ. ಈ ಕೇಂದ್ರವು ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕ್ಷಿಪ್ರ ಮತ್ತು ಹೈಟೆಕ್ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ’ ಎಂದರು. 

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನಿನ (ಕೆಡಿಇಎಂ) ಸ್ಪೋಕ್-ಶೋರ್ ನೀತಿಯಡಿಯಲ್ಲಿ 2025ರ ಹೊತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2026ರ ಹೊತ್ತಿಗೆ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ಕ್ಲಸ್ಟರ್‍ಗಳಲ್ಲಿ 5 ಸಾವಿರ ಐಟಿ ಕಂಪನಿಗಳು ಮತ್ತು ನವೋದ್ಯಮಗಳು ನೆಲೆಯೂರುವಂತೆ ಮಾಡಲಾಗುವುದು ಎಂದು ಅವರು ವಿವರಿಸಿದರು. 

ಮೈಸೂರಿನಲ್ಲಿ ಐಬಿಎಂ ತನ್ನ ಸಿಐಸಿ ಕೇಂದ್ರವನ್ನು ತೆರೆದಿರುವುದರಿಂದ ರಾಜ್ಯವು ಜಾಗತಿಕ ಮಟ್ಟದ ಡಿಜಿಟಲ್ ಸೇವೆಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ, `ಡಿಜಿಟಲ್ ಎಕಾನಮಿ ಮಿಷನ್ ಯೋಜನೆಯಡಿ 2025ರ ಹೊತ್ತಿಗೆ ರಾಜ್ಯಕ್ಕೆ ಕನಿಷ್ಠಪಕ್ಷ 100 ಕಂಪನಿಗಳ ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್(ಜಿಸಿಸಿ)ಗಳನ್ನು ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳು ಅತ್ಯಂತ ತ್ವರಿತ ಗತಿಯಲ್ಲಿ ಡಿಜಿಟಲ್ ವ್ಯವಸ್ಥೆಗೆ ಬದಲಾಗುತ್ತಿರುವುದು ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದರು. 

ಐಬಿಎಂನ ವ್ಯವಸ್ಥಾಪಕ ಪಾಲುದಾರ ಅಮಿತ್ ಶರ್ಮಾ ಮಾತನಾಡಿ, `ಮೈಸೂರು ಸಿಐಸಿ ಕೇಂದ್ರವು ಭವಿಷ್ಯದ ತಂತ್ರಜ್ಞಾನ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಈ ಆರ್ಥಿಕ ವರ್ಷದ ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ 10 ಸಾವಿರ ಜನರನ್ನು ನೇಮಿಸಿಕೊಳ್ಳಲಾಗುವುದು. ಇದರಿಂದಾಗಿ ಐಬಿಎಂ ಕಂಪನಿಯು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ಹೈಬ್ರಿಡ್ ಕ್ಲೌಡ್ ಮುಂತಾದ ಕ್ಷೇತ್ರಗಳಲ್ಲಿ ಹೊಂದಿರುವ ಪರಿಣತಿಯು ಮತ್ತಷ್ಟು ಹೆಚ್ಚಾಗಲಿದೆ’ ಎಂದು ನುಡಿದರು. 

ಈ ಸಂದರ್ಭದಲ್ಲಿ ಐಟಿ-ಬಿಟಿ ಮತ್ತು ವಿದ್ಯುನ್ಮಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಐಟಿ ನಿರ್ದೇಶಕಿ ಮೀನಾ ನಾಗರಾಜ, ಲಹರಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಗುಪ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News