ಜಿಂದಾಲ್ ಗೆ ಭೂಮಿ ಪರಭಾರೆ ಸಿಎಂ ಮರುಪರಿಶೀಲನೆಯಲ್ಲಿದೆ ಎಂದ ಸರಕಾರ: ಹೈಕೋರ್ಟ್ ನಿಂದ ಅರ್ಜಿ ವಿಲೇ
ಬೆಂಗಳೂರು, ನ.8: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಕಂಪೆನಿಗೆ 3,667 ಎಕರೆ ಸರಕಾರಿ ಜಮೀನು ಪರಭಾರೆ ಮಾಡಲು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇ ಮಾಡಿದೆ.
ಈ ಸಂಬಂಧ ಬೆಂಗಳೂರಿನ ಕೆ.ಎ.ಪಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಇಡೀ ಪ್ರಕರಣ ಮುಖ್ಯಮಂತ್ರಿಗಳ ಮುಂದೆ ಮರು ಪರಿಶೀಲನೆಯಲ್ಲಿದೆ ಎಂಬುದಾಗಿ ಸರಕಾರಿ ವಕೀಲರು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಅರ್ಜಿ ವಿಲೇ ಮಾಡಿತು.
ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿಯೂ ಅತ್ಯಂತ ಕಡಿಮೆ ದರಕ್ಕೆ ಬಳ್ಳಾರಿಯ ಸಂಡೂರಿನಲ್ಲಿ ಇರುವ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಮಂಡಿಸಿತ್ತು ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ವಿಚಾರಣೆಯ ವೇಳೆ ಪೀಠವು ಸಂಪುಟದ ಒಪ್ಪಿಗೆ ಇಲ್ಲದೆ ಹೇಗೆ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಈ ಹಿಂದೆ ಪ್ರಶ್ನಿಸಿತ್ತು.