ಕ್ರೀಡಾ ಸಾಧಕ ಡಾ.ಎಂ.ಪಿ.ಗಣೇಶ್ ರಿಗೆ ಪದ್ಮಶ್ರೀ ಗೌರವ

Update: 2021-11-09 11:44 GMT

ಮಡಿಕೇರಿ ನ.9 : ಕ್ರೀಡಾ ಜಿಲ್ಲೆಯೆಂದೇ ಹೆಸರುವಾಸಿಯಾಗಿರುವ ಕೊಡಗಿನ ಹಾಕಿಪಟು, ಭಾರತ ಹಾಕಿ ತಂಡದ ಮಾಜಿ ನಾಯಕ ಡಾ.ಮೊಳ್ಳೆರ ಪಿ. ಗಣೇಶ್ ಪದ್ಮಶ್ರೀ ಬಿರುದು ಪಡೆದುಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಡಾ.ಎಂ.ಪಿ.ಗಣೇಶ್ ಹಾಕಿ ತಂಡದ ನಾಯಕರಾಗಿ, ತರಬೇತುದಾರರಾಗಿ, ಆಯ್ಕೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಕಿಯಲ್ಲಿ ಗೌರವ ಡಾಕ್ಟರೇಟ್‌ನ ಬದಲಾಗಿ “ಥೀಸೀಸ್” ಬರೆಯುವ ಮೂಲಕ ತಮಿಳುನಾಡುವಿನ ಕಾರೈಕುಡಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ದೇಶದ ಏಕೈಕ ಆಟಗಾರರೂ ಆಗಿದ್ದಾರೆ.

ಆರಂಭದಲ್ಲಿ ಫುಟ್‌ಬಾಲ್ ಆಟಗಾರರಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಇವರು ನಂತರ ಆರ್ಮಿಯಲ್ಲಿ ಹಾಕಿ ಆಟಗಾರನಾಗಿ ರೂಪುಗೊಂಡು ದೇಶವನ್ನು ಪ್ರತಿನಿಧಿಸಿದ್ದರು. 1971ರಲ್ಲಿ ಭಾರತ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದ ಸಂದರ್ಭ ತಂಡದ ಸದಸ್ಯರಾಗಿದ್ದ ಗಣೇಶ್, 1972ರ ಮೂನಿಚ್ ಒಲಿಂಪಿಕ್ಸ್ನಲ್ಲಿ ಭಾರತ ಪದಕ ಗಳಿಸಿದ ಸಂದರ್ಭವೂ ತಂಡದಲ್ಲಿದ್ದರು. 1973ರಲ್ಲಿ ಆರ್ಮಸ್ಟರ್ ಡಾಮ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಭಾರತ ತಂಡದಲ್ಲಿಯೂ ಎಂ.ಪಿ.ಗಣೇಶ್ ಆಟಗಾರರಾಗಿದ್ದರು.

1982ರಲ್ಲಿ ರಾಜ್ಯದಲ್ಲಿ ಗುಂಡೂರಾವ್ ಅವರ ಸರಕಾರದ ಅಧಿಕಾರಾವಧಿಯಲ್ಲಿ ಇವರಿಗೆ 10 ಎಕರೆ ಜಾಗ ಹುಟ್ಟೂರಾದ ಸುಂಟಿಕೊಪ್ಪದಲ್ಲಿ ದೊರೆಯುವುದರಲ್ಲಿತ್ತು. ಆದರೆ ಇದನ್ನು ನಯವಾಗಿ ತಿರಸ್ಕರಿಸಿದ ಗಣೇಶ್, ರಾಜ್ಯದಲ್ಲಿ ಕ್ರೀಡಾಶಾಲೆ ಸ್ಥಾಪನೆಯ ಬೇಡಿಕೆ ಮುಂದಿರಿಸಿದ್ದರು. ಪರಿಣಾಮ ಎಂಬಂತೆ ರಾಜ್ಯದಲ್ಲಿ ಕ್ರೀಡಾಶಾಲೆ ಪ್ರಾರಂಭಕ್ಕೆ ಎಂ.ಪಿ.ಗಣೇಶ್ ಕಾರಣೀಭೂತರಾದರು. ಆರಂಭದಲ್ಲಿ ಕರ್ನಾಟಕ ಯೂತ್ ಸರ್ವೀಸ್ ಸ್ಪೋರ್ಟ್ಸ್ ಹಾಸ್ಟೆಲ್ ಎಂದು ಪ್ರಾರಂಭಗೊಂಡ ಕ್ರೀಡಾ ಶಾಲೆ ನಂತರದ ವರ್ಷಗಳಲ್ಲಿ ಜಿಲ್ಲಾ ಯೂತ್ ಸರ್ವೀಸ್ ಕ್ರೀಡಾ ಶಾಲೆಯಾಗಿಯೂ ಕಾರ್ಯಾರಂಭಗೊಂಡಿತ್ತು. ಮಡಿಕೇರಿ, ಧಾರವಾಡ ಮತ್ತಿತರ ಕಡೆಗಳಲ್ಲಿ ಸಾಯಿ ಕ್ರೀಡಾ ವಸತಿ ನಿಲಯ ಸ್ಥಾಪನೆ, ಜಿಲ್ಲೆಯ ಹೊದ್ದೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಜಾಗ ಕಲ್ಪಿಸುವಲ್ಲಿ ಪ್ರಧಾನ ಪಾತ್ರವಹಿಸಿರುವ ಗಣೇಶ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ)ಯ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ನವದೆಹಲಿಯಲ್ಲಿ ಸಾಯಿ ನ್ಯಾಷನಲ್ ಹಾಕಿ ಅಕಾಡೆಮಿಯ ಸಿ.ಇ.ಓ. ಆಗಿ ಹಾಗೂ ಹೈಫರ್‌ಫಾರ್ಮೆನ್ಸ್ ಡೈರೆಕ್ಟರ್ ಆಫ್ ಸಾಯಿ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News