ಹಕ್ಕು-ಕರ್ತವ್ಯ ಅರಿತು ಕಾನೂನು ಪಾಲನೆ ಅಗತ್ಯ: ನ್ಯಾ.ಮುಸ್ತಫಾ ಹುಸೇನ್

Update: 2021-11-09 12:01 GMT

ಶಿವಮೊಗ್ಗ: ಹಕ್ಕುಗಳೊಂದಿಗೆ ಕರ್ತವ್ಯಗಳನ್ನೂ ಅರಿತು ಅದನ್ನು ಪಾಲಿಸುವುದು ಅತಿ ಮುಖ್ಯವಾಗಿದೆ. ಕಾನೂನಿನ ಪರಿಣಾಮ ತಿಳಿಯಬೇಕಾದರೆ ಅದರ ಅರಿವು ಮುಖ್ಯವಾಗುತ್ತದೆ ಆದ್ದರಿಂದ ಮಕ್ಕಳಾದಿಯಾಗಿ ಎಲ್ಲರೂ ದಿನನಿತ್ಯದ ಕಾನೂನುಗಳನ್ನು ಅರಿತು, ಇತರರಿಗೂ ತಿಳಿಸುವ ಮೂಲಕ ಕಾನೂನು ಸಾಕ್ಷರತೆ ಹೆಚ್ಚಿಸಬೇಕೆಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ. ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನೆ, ಎಟಿಎನ್‌ಸಿಸಿ ಕಾಲೇಜು, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ  ಮಂಗಳವಾರ ಎಟಿಎನ್‌ಸಿಸಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ‘ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ  ಮಕ್ಕಳ ಮೊಬೈಲ್ ಬಳಕೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇದರಿಂದ ಅನೇಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾಧದ ಸಂಗತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಮಕ್ಕಳು, ಯುವಜನತೆ ಮಾನಸಿಕ, ದೈಹಿಕ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಅರಿವು ಹೆಚ್ಚಬೇಕು ಎಂದು ಕಿವಿ ಮಾತು ಹೇಳಿದರು.

ಸಿಡಬ್ಲ್ಯುಸಿ ಮತ್ತು ಪಿಎಲ್‌ವಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಜಗತ್ತಿನ ಮೂರು ಪ್ರಮುಖ ಅಪರಾಧಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಈ ಅಪರಾಧ ನಡೆಯುತ್ತಲೇ ಇದೆ. ಅನಕ್ಷರತೆ, ನಿರುದ್ಯೋಗ, ಬಡತನ ಇತರೆ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ದುರ್ಬಲ ವರ್ಗವನ್ನು ಗುರಿಯಾಗಿಸಿಕೊಂಡು ಈ ಕೃತ್ಯವೆಸಲಾಗುತ್ತಿದೆ.ಆದರೆ ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯಲು ಕಾಯ್ದೆ ಕಾನೂನುಗಳಿವೆ. ಇದರಡಿ ಪ್ರಕರಣ ದಾಖಲಾದಾಗ ಮಾತ್ರ ಇದು ಎಷ್ಟು ದೊಡ್ಡ ಅಪರಾಧ ಎಂದು ಅರಿವಾಗುತ್ತದೆ.

ಕಾರ್ಯಕ್ರಮದಲ್ಲಿ ಎಟಿಎನ್‌ಸಿಸಿ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಎಂ.ಸುರೇಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಟಿಎನ್‌ಸಿಸಿ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ.ನಾಗರಾಜು ಸ್ವಾಗತಿಸಿದರು. ಪಿಯು ಮತ್ತು ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾನೂನಿಗೂ ಮತ್ತು ಮಾನಸಿಕ ಆರೋಗ್ಯಕ್ಕೂ ಹತ್ತಿರದ ನಂಟಿದೆ. ಒಂದು ಅಪರಾಧದ ಹಿಂದೆ ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಇಲ್ಲದಿರುವುದನ್ನು ಕಾಣಬಹುದು. ಆದ ಕಾರಣ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ. ಅದರಲ್ಲೂ ಹದಿಹರೆಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವುದು ಅಗತ್ಯ.
- ಡಾ.ಪ್ರೀತಿ ವಿ.ಶ್ಯಾನ್‌ಬಾಗ್ ,ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಹಾಗೂ ಮನೋವೈದ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News