ಷರತ್ತುಗಳಿಲ್ಲದೆ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಮುಕ್ತ ಆಹ್ವಾನ: ಡಿ.ಕೆ.ಶಿವಕುಮಾರ್

Update: 2021-11-09 12:55 GMT
Photo: Twitter/@INCKarnataka

ಬೆಂಗಳೂರು, ನ.9: ಪಕ್ಷ ಬಿಟ್ಟು ಹೋಗಿರುವವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರುವವರು, ಪಕ್ಷ ಸೇರಲು ಬಯಸುವವರು, ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆ. ಅಧಿಕಾರಕ್ಕಾಗಿ ಯಾವುದೇ ರೀತಿಯ ಶರತ್ತು ಹಾಕುವಂತಿಲ್ಲ. ಶರತ್ತು ಹಾಕುವವರಿಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ದೇವೇಂದ್ರಪ್ಪ ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.

ಬಹಳ ದಿನಗಳಿಂದ ಬಿ.ದೇವೇಂದ್ರಪ್ಪ ಅವರ ಪಕ್ಷ ಸೇರ್ಪಡೆ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಬೇಷರತ್ ಆಗಿ ದೇವೇಂದ್ರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು. ನಾನು, ರಾಜೇಶ್, ಜಯಸಿಂಹ, ಬಸವರಾಜ ಸೇರಿದಂತೆ ಎಲ್ಲ ಸ್ಥಳೀಯ ನಾಯಕರು ಸಮಾಲೋಚಿಸಿ, ಶರತ್ತು ಇಲ್ಲದೆ ಪಕ್ಷ ಸೇರುವವರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೆವು ಎಂದು ಅವರು ಹೇಳಿದರು.

12 ವರ್ಷಗಳ ನಂತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಎಲ್ಲರಿಗೂ ಮುಕ್ತ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಇದೇ 14 ರಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಹಳೆಯ ಸದಸ್ಯರು ಕೂಡ ಈಗ ತಮ್ಮ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬಹುದು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್‌ಎಸ್‌ಯುಐ, ರೈತ ಘಟಕ ಸೇರಿದಂತೆ ಎಲ್ಲ ಘಟಕಗಳಲ್ಲಿ ಮತ್ತೆ ಸದಸ್ಯತ್ವ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಅವರು ಹೇಳಿದರು.

ನ.14 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಭಿಯಾನ ಆರಂಭಿಸುತ್ತಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇದಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲ ನಾಯಕರು ಆಗಮಿಸಿ ಬೆಳಗ್ಗೆ 10 ಗಂಟೆಗೆ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಪ್ರತಿಯೊಬ್ಬರೂ 5 ರೂ.ನೀಡಿ ಸದಸ್ಯತ್ವ ಪಡೆಯಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಕ್ರಿಯ ಸದಸ್ಯರಾಗಲು 100 ಜನರನ್ನು ಮಾಡಿ 100 ರೂ.ಶುಲ್ಕ ಕಟ್ಟಬೇಕು. ರಾಜ್ಯದ ವಿವಿಧ ಭಾಗಗಳಿಂದ ಎಲ್ಲ ಘಟಕದ ನಾಯಕರು, ಪದಾಧಿಕಾರಿಗಳು, ಪಂಚಾಯಿತಿ ಮಟ್ಟದ ಹಾಲಿ ಹಾಗೂ ಮಾಜಿ ಸದಸ್ಯರು ಆಗಮಿಸಬೇಕು ಎಂದು ಅವರು ಹೇಳಿದರು.

ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಎಂದು ಮನದಟ್ಟು ಮಾಡಬೇಕಾಗಿದೆ. ತ್ರಿವರ್ಣ ಧ್ವಜ ಹಾಕಿಕೊಳ್ಳುವ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸಿದ್ಧಾಂತದ ಮೇಲೆ ನಂಬಿಕೆ ಇರುವವರು ಈ ಸದಸ್ಯತ್ವ ಪಡೆಯಬಹುದು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವ ಬಿ.ದೇವೇಂದ್ರಪ್ಪ ಹಾಗೂ ಇತರ ಮುಖಂಡರನ್ನು ನಮ್ಮ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ. ಅವರು ಸ್ವ ಇಚ್ಛೆಯಿಂದ ಕಾಂಗ್ರೆಸ್ ಸೇರಿ ಸೇವೆ ಮಾಡಲು ಮುಂದಾಗಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿರುವ ಶಾಸಕರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುತ್ತೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಲಿ. ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ' ಎಂದರು.

ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಬಿಟ್ ಕಾಯಿನ್ ವಿಚಾರವಾಗಿ ಪೊಲೀಸ್ ದಾಖಲೆ ಮಾಡಿರುವ ಎಫ್‌ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದರು.

ಈ ಹಿಂದೆ ಸಂದೀಪ್ ಪಾಟೀಲ್ ಮಾಧ್ಯಮಗೋಷ್ಠಿ ನಡೆಸಿದ್ದು, ಈ.ಡಿ.ಗೆ ಪ್ರಕರಣ ವಹಿಸಿರುವ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಾಹಿತಿಯನ್ನು ನೀಡಲಿ. ನಾವು ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು, ನಾವು ಸೂಕ್ತ ಸಮಯದಲ್ಲಿ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ನಾವು ತನಿಖೆ ಮಾಡಿಸುವುದು ಬೇರೆ ವಿಚಾರ. ಬಿಜೆಪಿ ಅಧಿಕಾರದಲ್ಲಿದೆ. ಅವರ ಕೈಯಲ್ಲಿ ಸರಕಾರ ಇದೆ. ಗೃಹ ಮಂತ್ರಿಗಳು ಇದ್ದಾರೆ. ರಾಜ್ಯದ ಜನರಿಂದ ಅವರು ಮುಚ್ಚಿಟ್ಟಿರುವ ಸತ್ಯಾಂಶ ಹೊರಗಿಡಲಿ. ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಜತೆ ನಲಪಾಡ್ ಆರೋಪಿಯಾಗಿದ್ದರೂ ಶ್ರೀಕಿ ವಿರುದ್ಧ ಯಾಕೆ ವಿಚಾರಣೆ ಮಾಡಲಿಲ್ಲ ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ನಾನು ಗೃಹಮಂತ್ರಿಗಳಿಂದ ಹೇಳಿಕೆ ಬಯಸುತ್ತೇನೆ. ಮಾಧ್ಯಮಗಳ ಮೂಲಕ ನಾನು ಯಾರ ಹೆಸರನ್ನೂ ಕೇಳಲು ಬಯಸುವುದಿಲ್ಲ. ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇದ್ದರೆ ಅವರು ಹೇಳಲಿ. ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಜಾಮೀನು ಪಡೆದಿದ್ದ ಶ್ರೀಕಿ ಅವರನ್ನು ಮತ್ತೆ ಬಂಧಿಸಿರುವುದರ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ, 'ಈ ಪ್ರಕರಣದಲ್ಲಿ ಎಷ್ಟು ಎಫ್‌ಐಆರ್ ಬಂದಿದೆ. ಯಾರ ಮೇಲೆ ಪ್ರಕರಣ ದಾಖಲಾಗಿದೆ, ಹೈಕೋರ್ಟ್ನಲ್ಲಿದ್ದ ಪ್ರಕರಣ ಹಿಂಪಡೆದಿದ್ದು ಯಾಕೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸಲಿ. ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರಕಾರ ಈ ಪ್ರಕರಣದಲ್ಲಿ ಪಂಚನಾಮದಿಂದ ಹಿಡಿದು ಈ.ಡಿ.ಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ ಎಂದು ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News