ಸಂಘಪರಿವಾರ ಸಂಘಟನೆಗಳಿಂದ ಜನಜಾಗೃತಿ ಸಭೆ ಹಿನ್ನೆಲೆ: ನ.10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ

Update: 2021-11-09 15:54 GMT
ಡಾ.ಬಿ.ಸಿ.ಸತೀಶ

ಮಡಿಕೇರಿ: ಸಂಘಪರಿವಾರ ಸಂಘಟನೆಗಳು ನ.10 ರಂದು ಆಯೋಜಿಸಿರುವ ಜನಜಾಗೃತಿ ಸಭೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ, 1973ರ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್ ಆಕ್ಟ್, 1963ರ ಕಲಂ 35 ರಡಿ ದತ್ತವಾದ ಅಧಿಕಾರದಂತೆ ನವೆಂಬರ್, 10 ರ ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ನಿಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶ, ಸರ್ಕಾರಿ ಕಾರ್ಯಕ್ರಮ ಮುಂತಾದವುಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸಬೆ, ಸಮಾರಂಭ ಮತ್ತು ಮೆರವಣಿಗೆಯನ್ನು ನಡೆಸಬಾರದು. ಎಲ್ಲಾ ಸಾರ್ವಜನಿಕ/ ರಾಜಕೀಯ ಬಹಿರಂಗ ಸಭೆ-ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಭಾಷಣ, ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತಾ-ರೋಕೋ ಹಾಗೂ ಮುತ್ತಿಗೆ ಮುಂತಾದುವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. 

ವಿಜಯೋತ್ಸವ / ಪ್ರತಿಭಟನೆ ನಡೆಸುವುದು, ಪಟಾಕಿ ಸಿಡಿಸುವುದು, ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವುದು, ಕಪ್ಪು ಬಣ್ಣದ ಅಥವಾ ಯಾವುದೇ ಪ್ರಚೋದನಾಕಾರಿ ಬಾವುಟ ಪ್ರದರ್ಶಿಸುವುದು, ಪ್ರಚೋದನಾತ್ಮಕ ಘೋಷಣೆ ಕೂಗುವುದು, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ/ ಬಾವುಟಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದೆ.

ಯಾವುದೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರ ಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇದಿತ ಅವಧಿಯಲ್ಲಿ 5 ಜನರಿಗಿಂತ ಮೇಲ್ಪಟ್ಟು ಗುಂಪು ಸೇರಬಾರದು. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್/ ಎ.ಟಿ.ಎಂ. ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳು ಆಯುಧಗಳನ್ನು ಹೊಂದಿರುವುದನ್ನು ಹೊರತುಪಡಿಸಿ, ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ / ಮಾರಣಾಂತಿಕ ಹತ್ಯಾರುಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಪೊಲೀಸ್ ಪಥಸಂಚಲನ
2015 ರಲ್ಲಿ ಟಿಪ್ಪು ಜಯಂತಿಯ ಸಂದರ್ಭ ಮಡಿಕೇರಿಯಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮೃತಪಟ್ಟ ಕುಟ್ಟಪ್ಪ ಅವರ ಸ್ಮರಣಾರ್ಥ ಸಂಘಪರಿವಾರ ಸಂಘಟನೆಗಳು ನ.10 ರಂದು ಜಾಗೃತಿ ಜಾಥ ಮತ್ತು ಸಭಾ ಕಾರ್ಯಕ್ರಮ ನಡೆಸಲು ನಿರ್ಧರಿಸಿವೆ. ಇದರ ನಡುವೆಯೇ ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ನಗರದ ಬೀದಿ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ನಗರದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News