ಯುವ ಬ್ರಿಗೇಡ್ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ನಿಯೋಜಿಸುವಂತೆ ಯಾದಗಿರಿ ಜಿ.ಪಂ.ಸಿಇಒ ಸೂಚನೆ
ಬೆಂಗಳೂರು, ನ.9: ಯುವ ಬ್ರಿಗೇಡ್ ವತಿಯಿಂದ ಯಾದಗಿರಿ ನಗರದಲ್ಲಿ ನ.11ರಂದು ‘ಪ್ರೇರಣಾ ಪ್ರವಾಹ’ ಎಂಬ ಶಿಕ್ಷಕರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಜಿಲ್ಲೆಯ ಶಾಲೆಗಳಿಂದ ಒಬ್ಬ ಅಥವಾ ಇಬ್ಬರು ಶಿಕ್ಷಕರನ್ನು ಶಾಲಾ ತರಗತಿಗಳಿಗೆ ತೊಂದರೆಯಾಗದಂತೆ ನಿಯೋಜಿಸಲು ಮತ್ತು ಭಾಗವಹಿಸುವ ಶಿಕ್ಷಕರಿಗೆ ನಿಯಮಾನುಸಾರ ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ ನೀಡಿದ್ದಾರೆ.
ಈ ಸಂಬಂಧ ಯಾದಗಿರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನ.6ರಂದು ಪತ್ರ ಬರೆದಿರುವ ಅವರು, ಈ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸರಕಾರಿ ಶಿಕ್ಷಕರನ್ನು ಹಾಗೂ ಅನುದಾನಿತ ಶಾಲಾ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಭಾಗವಹಿಸಲು ತಿಳಿಸುವಂತೆ ಹಾಗೂ ಭಾಗವಹಿಸುವ ಶಿಕ್ಷಕರಿಗೆ ‘ಒ/ಡಿ’ ಎಂದು ಪರಿಗಣಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಅದರಂತೆ, ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳಿಂದ ಒಬ್ಬ ಅಥವಾ ಇಬ್ಬರು ಶಿಕ್ಷಕರನ್ನು ಶಾಲಾ ತರಗತಿಗಳಿಗೆ ತೊಂದರೆಯಾಗದಂತೆ ನಿಯೋಜಿಸಿ ಮತ್ತು ಭಾಗವಹಿಸುವ ಶಿಕ್ಷಕರಿಗೆ ನಿಯಮಾನುಸಾರ ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ಅವರು ಸೂಚನೆ ನೀಡಿದ್ದಾರೆ.