×
Ad

ಪರಿಶಿಷ್ಠ ಪಂಗಡದವರು ಮಾತ್ರವಲ್ಲ ತುಳಿತಕ್ಕೊಳಗಾದ ಎಲ್ಲರೂ ದಲಿತರು: ಸಿದ್ದರಾಮಯ್ಯ

Update: 2021-11-09 22:37 IST

ಮೈಸೂರು: ನಾನು ಕೂಡ ದಲಿತನೆ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ, ತುಳಿತಕ್ಕೊಳಗಾದ ಎಲ್ಲರೂ ದಲಿತರೆ. ನಾನೂ ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನೂ ಕೂಡ ದಲಿತನೇ ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ನಗರದ ಹಿನಕಲ್ ನಲ್ಲಿ ಮಂಗಳವಾರ  ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ದಲಿತರು ಸಿಎಂ ಆದರೆ ನನ್ನದೇನೂ ತಕರಾರಿಲ್ಲ. ಯಾರು ಸಿಎಂ ಆಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ವಿಚಾರದಲ್ಲಿ ಒಂದು ಸಂಸ್ಕೃತಿ ಇದೆ ಹೇಳಿದರು.

ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದು ನನ್ನ ಭಾಷಣವನ್ನು ತಿರುಚಿದ್ದಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಲಿತರು ಸಿಎಂ ಅಂತ ಘೋಷಿಸಿದರೆ ನಾನು ಸಂತೋಷ ಪಡುತ್ತೇನೆ. ಆದರೆ, ನಮ್ಮ ಪಕ್ಷದಲ್ಲಿ ಶಾಸಕರು ಸೂಚಿಸಿದವರನ್ನು ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತದೆ. ಒಂದು ವೇಳೆ ದಲಿತರು ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಮೀಸಲಿಟ್ಟೆ. ನಾನು ಅಧಿಕಾರಕ್ಕೇರುವ ಮುನ್ನ ಯಾವ ಸರ್ಕಾರಗಳು ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಟ್ಟಿರಲಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾನೂನು ರೂಪಿಸಿದೆ. ಇಂದಿಗೂ ದೇಶದಲ್ಲಿ ಈ ಕಾನೂನನ್ನ ತಂದಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ನಾನು ಜಾರಿಗೆ ತಂದೆ. ಸಿಎಂ ಆದ ಒಂದು ಗಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಚ್.ಪಿ.ಮಂಜುನಾಥ್, ಜ್ಞಾನಪ್ರಕಾಶ್ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಕೆ.ಮರೀಗೌಡ, ಹಿನಕಲ್ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News