ಪೈಲ್ವಾನರು, ಕ್ರೀಡಾಪಟುಗಳ ಮಾಸಾಶನಕ್ಕೆ 2.18 ಕೋಟಿ ರೂ. ಬಿಡುಗಡೆ: ಸಚಿವ ನಾರಾಯಣಗೌಡ

Update: 2021-11-09 17:48 GMT

ಬೆಂಗಳೂರು, ನ.9: ‘ಒಂದು ವರ್ಷದಿಂದ ಬಾಕಿಯಿದ್ದ ಮಾಜಿ ಪೈಲ್ವಾನರು ಹಾಗೂ ಮಾಜಿ ಕ್ರೀಡಾಪಟುಗಳ ಮಾಸಾಶನಕ್ಕೆ 2.18 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ' ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನರ ಮಾಸಾಶನಕ್ಕಾಗಿ 2.18 ಕೋಟಿ ರೂ.ಗಳನ್ನು ಜಿಲ್ಲಾ ಪಂಚಾಯತ್‌ಗಳಿಗೆ ಹಂಚಿಕೆ ಮಾಡಿ ಬಿಡುಗಡೆಗೊಳಿಸಲಾಗಿದೆ. ಇಲಾಖಾ ಪ್ರಗತಿ ಪರಿಶೀಲನೆಗೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಮಾಜಿ ಕ್ರೀಡಾಪಟುಗಳು, ಕುಸ್ತಿಪಟುಗಳು ಮಾಸಾಶನ ವಿಳಂಬದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಚಿವ ನಾರಾಯಣಗೌಡ, ಒಂದು ತಿಂಗಳೊಳಗೆ ಹಣ ಬಿಡುಗಡೆ ಮಾಡುವಂತೆ ತಾಕೀತು ಮಾಡಿದ್ದರು. ಇದೀಗ ಅವರ ಸೂಚನೆಯಂತೆ ಮಾಸಾಶನಕ್ಕೆ 2.18 ಕೋಟಿ ರೂ.ಹಣ ಬಿಡುಗಡೆಯಾಗಿದ್ದು, ಹಲವು ತಿಂಗಳುಗಳಿAದ ಸಂಕಷ್ಟದಲ್ಲಿದ್ದ ಕ್ರೀಡಾಪಟುಗಳು ಹಾಗೂ ಪೈಲ್ವಾನರಿಗೆ ಅನುಕೂಲವಾಗಲಿದೆ. 

ರಕ್ಷಣೆಗೆ ಬದ್ಧ: ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳು ಹಾಗೂ ಮಾಜಿ ಪೈಲ್ವಾನರಿಗೆ ಸರಿಯಾದ ರೀತಿಯಲ್ಲಿ ಮಾಸಾಶನ ಸಿಗುತ್ತಿಲ್ಲ ಎಂದು ನನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಹಣಕಾಸಿನ ಬಗ್ಗೆ ಮಾಹಿತಿ ಪಡೆದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು. ಮಾಜಿ ಕ್ರೀಡಾಪಟುಗಳು, ಮಾಜಿ ಪೈಲ್ವಾನರ ಮಾಸಾಶನಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಸಾಶನ ವಿವರ: ರಾಜ್ಯ ಸರಕಾರದಿಂದ ರಾಜ್ಯ ಮಟ್ಟದ ಮಾಜಿ ಕ್ರೀಡಾಪಟುಗೆ 1 ಸಾವಿರ ರೂ., ರಾಷ್ಟ್ರಮಟ್ಟದ ಕ್ರೀಡಾಪಟುವಿಗೆ 1,500 ರೂ. ಹಾಗೂ ಅಂತರ್‌ರಾಷ್ಟ್ರೀಯ ಕ್ರೀಡಾಪಟುವಿಗೆ 2 ಸಾವಿರ ರೂ. ಮಾಸಾಶನ ಹಾಗೂ ರಾಜ್ಯಮಟ್ಟದ ಕುಸ್ತಿಪಟುವಿಗೆ 2,500 ರೂ., ರಾಷ್ಟ್ರ ಮಟ್ಟದ ಕುಸ್ತಿಪಟುವಿಗೆ 3ಸಾವಿರ ರೂ. ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಕುಸ್ತಿಪಟುವಿಗೆ 4 ಸಾವಿರ ರೂ.ಮಾಸಾಶನ ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News