ಹೈಕೋರ್ಟ್‍ನಲ್ಲಿ ಸರಕಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಅಧಿಕಾರಿಗಳು ಗೈರಾಗುವಂತಿಲ್ಲ: ಸರಕಾರ ಆದೇಶ

Update: 2021-11-10 12:43 GMT

ಬೆಂಗಳೂರು, ನ.10: ಹೈಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದಾಗ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ನಡವಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ರಾಜ್ಯ ಸರಕಾರ ತನ್ನೆಲ್ಲಾ ಅಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ, ಹೈಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಉಪಸ್ಥಿತಿ ಬಯಸಿದಾಗ ಅಂತಹ ಅಧಿಕಾರಿಗಳು ತಪ್ಪದೇ ಖುದ್ದಾಗಿ ಮತ್ತು ಆದ್ಯತೆ ಮೇರೆಗೆ ಹಾಜರಾಗಬೇಕು. ಒಂದೊಮ್ಮೆ ಅನಾರೋಗ್ಯವೂ ಸೇರಿದಂತೆ ತುರ್ತು ಅನಿವಾರ್ಯತೆ ಇದ್ದು, ವಿಚಾರಣೆಗೆ ಹಾಜರಾಗುವುದು ಸಾಧ್ಯವಾಗದಿದ್ದರೆ ಈ ವಿಚಾರವನ್ನು ಮುಂಚಿತವಾಗಿ ಸರಕಾರಿ ವಕೀಲರಿಗೆ ತಿಳಿಸಬೇಕು. ಅಧಿಕಾರಿಗಳು ಈ ನಿರ್ದೇಶವನ್ನು ಪಾಲಿಸದಿದ್ದರೆ ಅಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಲಾಗಿದೆ.

ನಿರ್ವಸಿತರಿಗೆ ವಸತಿ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸರಕಾರ ಪ್ರತಿಕ್ರಿಯೆ ಸಲ್ಲಿಸದ ಹಿನ್ನೆಲೆಯಲ್ಲಿ ಹಾಗೂ ಧಾರವಾಡದ ಮಾನಸಿಕ ಆಸ್ಪತ್ರೆ ಡಿಮ್ಹಾನ್ಸ್‍ಗೆ ಸೂಕ್ತ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಹಲವು ನಿರ್ದೇಶಗಳನ್ನು ನೀಡಿದ ನಂತರವೂ ಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದಾಗಿ ವಿಚಾರಣೆಗೆ ಹಾಜರಾಗಿ ಆದೇಶ ಪಾಲಿಸದೆ ಇರುವುದಕ್ಕೆ ವಿವರಣೆ ನೀಡುವಂತೆ ನಿರ್ದೇಶಿಸಿತ್ತು.

ಆ ಪ್ರಕಾರ 2021ರ ನ.8ರಂದು ಎರಡೂ ಅರ್ಜಿಗಳ ವಿಚಾರಣೆಗೆ ಅಧಿಕಾರಿಗಳ ಹಾಜರಾಗಬೇಕಿದ್ದರೂ ಕ್ಯಾಬಿನೆಟ್ ಮೀಟಿಂಗ್ ಹೆಸರಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದರು. ಅಧಿಕಾರಿಗಳ ವರ್ತನೆಗೆ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಇಂತಹ ನಡವಳಿಕೆಯನ್ನು ಸಹಿಸಲಾಗದು. ನ್ಯಾಯಾಲಯದ ಆದೇಶಗಳನ್ನೂ ಅಧಿಕಾರಿಗಳು ಪಾಲಿಸುವುದಿಲ್ಲ. ವಿಚಾರಣೆಗೆ ಹಾಜರಾಗುವುದೂ ಇಲ್ಲ. ಹೀಗೆ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. 

ಅಧಿಕಾರಿಗಳ ಗೈರು ಹಾಜರಿಗೆ ರಾಜ್ಯ ಅಡ್ವೊಕೇಟ್ ಜನರಲ್ ಖುದ್ದು ಕ್ಷಮೆ ಕೋರಿದ್ದರು. ಈ ವೇಳೆ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗದಂತೆ ಸುತ್ತೋಲೆ ಹೊರಡಿಸಿ ಎಂದು ಪೀಠ ಸರಕಾರಕ್ಕೆ ಎಜಿ ಮೂಲಕ ತಿಳಿಸಿತ್ತು. ಅದರಂತೆ ಇದೀಗ ಸಿಎಸ್ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯನ್ನು ಸರಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಸರಕಾರದ ಎಲ್ಲ ಇಲಾಖಾವಾರು ಮುಖ್ಯಸ್ಥರಿಗೆ ರವಾನಿಸಲಾಗಿದೆ. ಸರಕಾರದ ಸುತ್ತೋಲೆಯಂತೆ ಇನ್ನು ಮುಂದೆ ಸರಕಾರಿ ಅಧಿಕಾರಿಗಳು ನ್ಯಾಯಾಲಯಗಳ ನಿರ್ದೇಶನವಿದ್ದಾಗ ತಪ್ಪದೇ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News