ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2021-11-10 13:58 GMT

ಮೈಸೂರು,ನ.10: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು  ನಿಷೇಧ ಮಾಡುವ ಮೂಲಕ ಒಂದು ಧಾರ್ಮಿಕ ಆಚರಣೆಯನ್ನು ಸರ್ಕಾರ ರದ್ದು ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬನ್ನಿ ಮಂಟಪದ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ಧರ್ಮ ನಿರಪೇಕ್ಷ ಸಂವಿಧಾನ, ಪ್ರತಿಯೊಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಭಾರತೀಯ ಪ್ರಜೆಯಾದ ನಮ್ಮ ಕರ್ತವ್ಯ.  ಆದರೆ ರಾಜ್ಯ ಸರ್ಕಾರ ಒಂದ ವರ್ಗಕ್ಕೆ ಸೀಮಿತ ಎಂದು ಧಾರ್ಮಿಕ ಭಾವನೆಯನ್ನು ರದ್ದುಪಡಿಸುವುದು ಅವೈಜ್ಞಾನಿಕ ಮತ್ತು ನೆಲದ ಮಣ್ಣಿನ ಕಾನೂನಿಗೆ ವಿರುದ್ಧವಾದುದು ಎಂದು ಕಿಡಿಕಾರಿದರು.

ಟಿಪ್ಪು ಸುಲ್ತಾನ್ ಈ ದೇಶದ ವೀರ ಸೇನಾನಿ, ಅವನ ಸ್ಮರಣೆ ಪ್ರಸ್ತುದ ದಿನಗಳಲ್ಲಿ ಅತ್ಯವಶ್ಯಕ, ಇಂತಹ ಮಹಾನ್ ವ್ಯಕ್ತಿಗಳನ್ನು ನೆನಪು ಮಾಡಿಕೊಂಡು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವುದು ಅತ್ಯಂತ ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಜಾತಿ ಧರ್ಮ ವರ್ಣ ಮತ್ತು ವರ್ಗವವನ್ನು  ಎತ್ತಿಕಟ್ಟುವ ಮೂಲಕ ದೇಶದ ಶಾಂತಿ ಸಮಾನತೆ ಭಾತೃತ್ವವನ್ನು ಹೊಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ ಕೆಲವರ ಮತ್ತು ಉಳ್ಳವರ ಕೈಯಲ್ಲಿ ಸಿಲುಕಿಕೊಂಡಿದೆ. ಹಾಗಾಗಿ  ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಪ್ರಜಾಪ್ರಭುತ್ವ ಇದ್ದಿದ್ದರೆ ಹಾಡುಹಗಲೆ ಇಷ್ಟೊಂದು ಕೊಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿರಲಿಲ್ಲ, ಅನ್ನ ಕೊಡುವ  ರೈತರ ಕೊಲೆ ನಡೆಯುತ್ತಿತ್ತೆ ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿ ರದ್ದುಗೊಳಿಸಿರುವ ಕುರಿತು ಕಾನೂನು ಹೋರಾಟ ನಡೆಸಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡು ಹೋರಾಟ ರೂಪಿಸಲಾಗುತ್ತದೆ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಟಿಪ್ಪು ಸುಲ್ತಾನ್ ಅವರ 271 ನೇ  ಜನ್ವ ದಿನಾಚರಣೆ ನಮ್ಮೆಲ್ಲರ ಕರ್ತವ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ರದ್ದುಗೊಳಿಸಿತು. ಆದರೆ ಕಳೆದ ವರ್ಷ ನಾನು ಮುಡಾ ಕಚೇರಿ ಆವರಣದಲ್ಲೇ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇನೆ ಎಂದು ತಿಳಿಸಿದರು.

ಅನೇಕರು ಟಿಪ್ಪು ಇತಿಹಾಸ ತಿರುವುಚವ ಕೆಲಸ ಮಾಡುತ್ತಿದ್ದಾರೆ. ಅರಮನೆ ಮುಂಭಾಗ ಇರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಈವತ್ತು ಜೀವಂತ ಸಾಕ್ಷಿಯಾಗಿದೆ. ಟಿಪ್ಪು ಒಬ್ಬ ಅಲ್ಪಸಂಖ್ಯಾತ ಎಂಬ ಒಂದೇ ಕಾರಣಕ್ಕೆ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಸೆಡ್ಡು ಹೊಡೆದು ನಾವು ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಸಾಮಾಜ್ರ್ಯ ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿದೆ. ಸರ್ಕಾರ ನಿಷೇದ ಮಾಡಿದ ಸಂದರ್ಭದಲ್ಲಿ ನಮ್ಮ ಆಚರಣೆ ನಿಂತಿಲ್ಲ, ಟಿಪ್ಪು ಜಯಂತಿಯನ್ನು ಒಂದು ಕೋಮಿನ ಜನ ಮಾತ್ರ ಆಚರಿಸುತ್ತಿಲ್ಲ ಎಲ್ಲಾ ವರ್ಗದ ಜಯ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ಟಿಪ್ಪು ಈ ದೇಶದ ಅಪ್ರತಿಮ ನಾಯಕ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಎಂಬ ಹುಲಿಯ ಜಯಂತಿಯನ್ನು ಹುಲಿಗಳೆ ಮಾಡಬೇಕು. ಇಲಿಗಳು ಹುಲಿ ಜಯಂತಿ ಮಾಡಲಾಗದು. ಹಾಗಾಗಿ ಬಿಜೆಪಿ ಇಲಿಗಳು ಮಾಡಲು ಸಾಧ್ಯವಾಗುತ್ತಿಲ್ಲ. ಈ ಇಲಿಗಳು ಬಿಲ ಕೊರೆಯುವ ಕೆಲಸ ಮಾಡುತ್ತಿವೆ. ಇಲಿಗಳ ಸಂಖ್ಯೆ ಜಾಸ್ತಿಯಾಗಿ ಬಿಲಕೊರೆದು ದೇಶವನ್ನ ಮಾರಾಟ ಮಾಡುತ್ತಿವೆ.

 -ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ, ಮೈಸೂರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News