×
Ad

ಶಾಲಾ ಜಾಗದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್

Update: 2021-11-10 21:13 IST

ಬೆಂಗಳೂರು, ನ.10: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್‍ಟಿಎಂ ಶಾಲೆಗೆ ಸೇರಿದ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ 36 ಸಾವಿರ ಚದರ ಅಡಿ ಭೂಮಿಯನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಿರುವ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಮೈಸೂರಿನ ಟಿ.ಎಸ್.ಲೋಕೇಶ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜೆ.ಎಂ.ಅನಿಲ್‍ಕುಮಾರ್ ವಾದ ಮಂಡಿಸಿ, ರಾಜ್ಯ ಸರಕಾರ ಈ ಸ್ಥಳವನ್ನು ಒತ್ತಡಕ್ಕೆ ಮಣಿದು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸಿದೆ. ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ಇಲ್ಲಿನ ಪುರಾತನ ಈಶ್ವರ ದೇವಾಲಯ ಮತ್ತು ಮಠದ ಕುರುಹುಗಳನ್ನು ನಾಶ ಮಾಡಿ ಸ್ಮಾರಕ ನಿರ್ಮಿಸುವುದು ಸರಿಯಲ್ಲ. ಹೀಗಾಗಿ, ಈ ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಬೇಕು ಮತ್ತು ಸರಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಸ್ವಾಮಿ ವಿವೇಕಾನಂದರ 100ನೆ ಜನ್ಮದಿನದ ಸ್ಮರಣಾರ್ಥ ಅವರು ದೇಶದ ವಿವಿಧೆಡೆ ಸಂಚರಿಸಿ ತಂಗಿದ್ದ ಪ್ರಮುಖ ಸ್ಥಳಗಳನ್ನು ಸ್ಮಾರಕ ರೂಪದಲ್ಲಿ ಕಾಪಾಡುವ ಉದ್ದೇಶದ ಹಿನ್ನೆಲೆಯಲ್ಲಿ ಈ ಭೂಮಿಯನ್ನು ರಾಜ್ಯ ಸರಕಾರ 2013ರ ಜ.9ರಂದು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News