ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಸಮೀಕ್ಷೆಗೆ ಆದೇಶ: ಸಚಿವೆ ಶಶಿಕಲಾ ಜೊಲ್ಲೆ

Update: 2021-11-10 16:16 GMT

ಬೆಂಗಳೂರು, ನ.10: ರಾಜ್ಯದಲ್ಲಿ 32,300ಕ್ಕಿಂತ ಹೆಚ್ಚು ವಕ್ಫ್ ಸಂಸ್ಥೆಗಳಿದ್ದು, 46 ಸಾವಿರಕ್ಕಿಂತ ಹೆಚ್ಚು ಆಸ್ತಿಗಳಿವೆ. ಅವುಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ವಕ್ಫ್ ಆಸ್ತಿಗಳ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ವಕ್ಫ್ ಪರಿಷತ್ತಿನ(ಸೆಂಟ್ರಲ್ ವಕ್ಫ್ ಕೌನ್ಸಿಲ್) ಸದಸ್ಯರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರಕ್ಕೂ ವಕ್ಫ್ ಆಸ್ತಿಗಳಿದ್ದು, ಅವುಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದರು.

ವಕ್ಫ್ ಆಸ್ತಿಗಳ ರಕ್ಷಣೆಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ವಕ್ಫ್ ಸಂಸ್ಥೆಗಳ ಆಸ್ತಿಗಳ ಸಂರಕ್ಷಣೆಗೆ ಕೇಂದ್ರ ವಕ್ಫ್ ಪರಿಷತ್ತಿನಿಂದ ಅನುದಾನ ನೀಡಿದಲ್ಲಿ ರಾಜ್ಯದ ಪಾಲಿನ ಅನುದಾನದೊಂದಿಗೆ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ. ವಕ್ಫ್ ಸಂಸ್ಥೆಯ ಖಾಲಿ ಜಾಗಗಳನ್ನು ಅಭಿವೃದ್ಧಿ ಪಡಿಸಿದರೆ ಅವುಗಳಿಂದ ಆದಾಯವೂ ಹೆಚ್ಚಾಗುತ್ತದೆ. ಇದರಿಂದ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ವಕ್ಫ್ ಪರಿಷತ್ತಿನಲ್ಲಿ ಬಾಕಿ ಇರುವ ರಾಜ್ಯದ ಪ್ರಸ್ತಾವನೆಗಳನ್ನು ಅಂಗೀಕರಿಸಿ ಮಂಜೂರಾತಿ ನೀಡುವುದರ ಅಗತ್ಯವಿದೆ. ರಾಜ್ಯದ ಹೆಚ್ಚಿನ ಪ್ರಸ್ತಾವನೆಗಳನ್ನು ಕೇಂದ್ರ ವಕ್ಫ್ ಪರಿಷತ್ತು ಅಂಗೀಕರಿಸಿದರೆ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿ ಸಮುದಾಯದ ಹೆಚ್ಚಿನ ಹಿತ ಕಾಪಾಡಲು ಅನುಕೂಲವಾಗುತ್ತದೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.

ರಾಜ್ಯದ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿವೆ. ಈ ಆಸ್ತಿಗಳ ಮೌಲ್ಯವೇ ನೂರಾರು ಕೋಟಿಯದ್ದಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯವಾದಿಗಳನ್ನು ನೇಮಿಸಲು ಆರ್ಥಿಕ ಸಂಪನ್ಮೂಲದ ಕೊರತೆಯಿದೆ. ಇಂತಹ ಪ್ರಕರಣಗಳ ನಿರ್ವಹಣೆಗೆ ನ್ಯಾಯವಾದಿಗಳ ನೇಮಕಾತಿ ವೆಚ್ಚವನ್ನು ಕೇಂದ್ರ ವಕ್ಫ್ ಪರಿಷತ್ತಿನಿಂದ ಭರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇಂತಹ ಪ್ರಕರಣಗಳು ಬೇಗ ಇತ್ಯರ್ಥವಾಗಿ ಅಂತಹ ಆಸ್ತಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ಮಂಡಳಿಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆಯಿದೆ. ಈ ನೌಕರರ ನೇಮಕಕ್ಕೆ ಕೇಂದ್ರ ವಕ್ಫ್ ಪರಿಷತ್ತಿನಿಂದ ಅನುದಾನ ನೀಡಬೇಕು ಹಾಗೆಯೇ ರಾಜ್ಯದ ವಕ್ಫ್ ಆಸ್ತಿಗಳ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ವಕ್ಫ್ ಪರಿಷತ್ತು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲು ಹೆಚ್ಚಿನ ಆಸ್ಥೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ-ಕೇಂದ್ರ ವಕ್ಫ್ ಪರಿಷತ್ತು ಸದಸ್ಯರ ಶ್ಲಾಘನೆ: ಕೇಂದ್ರ ವಕ್ಫ್ ಪರಿಷತ್ ಸದಸ್ಯರು ರಾಜ್ಯದಲ್ಲಿ ವಕ್ಫ್ ಅಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿವೆ. ಹಾಗೆಯೇ ವಕ್ಫ್ ಸಚಿವರಾಗಿ ಶಶಿಕಲಾ ಜೊಲ್ಲೆಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸದಸ್ಯರು, ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಸಚಿವರ ಬದ್ಧತೆಯನ್ನು ಪ್ರಶಂಸಿದರು.

ಕೇಂದ್ರದಿಂದ ರಾಜ್ಯದ ವಕ್ಫ್ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ವಕ್ಫ್ ಪರಿಷತ್ತು ಸದಸ್ಯರು ಹೇಳಿದರು. ಸಭೆಯಲ್ಲಿ ಕೇಂದ್ರ ವಕ್ಫ್ ಪರಿಷತ್ತು ಸದಸ್ಯರಾದ ನೌಶಾದ್, ರಯೀಸ್ ಖಾನ್ ಪಠಾಣ್, ಮುನವ್ವರಿ ಬೇಗಮ್, ಡಾ.ದರಕಶನ್ ಅಂದ್ರಾಬಿ, ಹನೀಫ್ ಅಲಿ, ಮುಹಮ್ಮದ್ ಹಾರೂನ್, ವಸೀಮ್ ರಾಹತ್ ಅಲಿ ಖಾನ್, ರಾಜ್ಯ ವಕ್ಫ್ ಮಂಡಳಿ ಸಿಇಒ ಮುಹಮ್ಮದ್ ಯೂಸುಫ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News