×
Ad

ಸಿಇಟಿ ಬರೆಯಲು ಕೋರಿ ಒಸಿಐ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲು ನಿರಾಕರಿಸಿದ ಹೈಕೋರ್ಟ್

Update: 2021-11-10 21:30 IST

ಬೆಂಗಳೂರು, ನ.10: 2021ರ ಸಾಲಿನ ಸಿಇಟಿ ಪರೀಕ್ಷೆ ಬರೆಯಲು ನಮಗೂ ಅವಕಾಶ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಗರೋತ್ತರ ಭಾರತೀಯ ನಾಗರಿಕ(ಒಸಿಐ) ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ.

ಸಾಗರೋತ್ತರ ಭಾರತೀಯ ನಾಗರಿಕ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ವಿದೇಶಗಳಲ್ಲಿ ನೆಲೆಸಿರುವ ನಾಗರಿಕರಿಗೆ ಯಾವ ಹಕ್ಕುಗಳನ್ನು ಕೊಡಬೇಕು ಎಂಬುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಷಯ. ನ್ಯಾಯಾಲಯಕ್ಕೆ ತನ್ನದೇ ಇತಿ ಮಿತಿಗಳಿದ್ದು, ಸರಕಾರದ ನೀತಿ ನಿರೂಪಣೆ ವಿಷಯಗಳಲ್ಲಿ ಕೋರ್ಟ್ ತಲೆ ಹಾಕಲು ಬರುವುದಿಲ್ಲ ಎಂದು ಹೇಳಿದೆ.

ಅಲ್ಲದೇ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಆಯಾ ದೇಶಗಳಲ್ಲಿ ಯಾವ ಹಕ್ಕುಗಳನ್ನು ಕೊಡಲಾಗಿದೆ ಎಂಬುದರ ಮೇಲೆ ಇಂತಹ ವಿಷಯಗಳು ಅವಲಂಬಿತವಾಗಿರುತ್ತವೆ. ಇದೊಂದು ರೀತಿಯಲ್ಲಿ ಕೊಡು-ಕೊಳ್ಳುವ ವಿಷಯ. ಯೋಜನಾ ನೀತಿಗಳನ್ನು ರೂಪಿಸುವಲ್ಲಿ ಅನೇಕ ಅಂತರ್‍ರಾಷ್ಟ್ರೀಯ ವಿಷಯಗಳು ಕೂಡ ಅಂತರ್ಗತವಾಗಿರುತ್ತವೆ. ಅವುಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸಲಾಗದು ಎಂದು ತಿಳಿಸಿದೆ.

ಕಾನೂನು ಏನಿದೆ ಎಂಬುದನ್ನು ಮಾತ್ರವೇ ಕೋರ್ಟ್ ಪರಿಶೀಲಿಸಬಹುದು. ಕಾನೂನು ಏನಿರಬೇಕು ಎಂಬುದು ಕಾನೂನು ರೂಪಿಸುವವರ ಅಧಿಕಾರದ ವ್ಯಾಪ್ತಿಗೆ ಬಿಟ್ಟ ವಿಚಾರ. ಹೀಗಾಗಿ ಸಾಗರೋತ್ತರ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಪೀಠ ತಿರಸ್ಕರಿಸಿದೆ. ಬೆಂಗಳೂರಿನ ಅಲೇಖ್ಯಾ ಪೊನ್ನೇಕಂತಿ ಸೇರಿದಂತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News