×
Ad

ಒಂದು ವರ್ಷದಲ್ಲಿ 56 ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಕ್ರಮ: ಸಚಿವ ವಿ.ಸೋಮಣ್ಣ

Update: 2021-11-10 21:59 IST

ಬೆಂಗಳೂರು, ನ.10: ರಾಜ್ಯದ ವಿವಿಧ ಭಾಗಗಳಲ್ಲಿ ನನೆಗುದಿಗೆ ಬಿದ್ದಿರುವ ಸುಮಾರು 56 ರೈಲ್ವೆ ಕೆಳ ಸೇತುವೆ(ಆರ್‍ಯುಬಿ)ಗಳ ನಿರ್ಮಾಣವನ್ನು 2021-22ನೆ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, 2007ರಿಂದ 9 ರೈಲ್ವೆ ಯೋಜನೆಗಳು ರಾಜ್ಯಕ್ಕೆ ಮಂಜೂರಾಗಿ ಎಂಟು ಯೋಜನೆಗಳ ಕಾಮಗಾರಿ ಆರಂಭವಾಗಿದೆ. ಆದರೆ, ಮಂದಗತಿಯಲ್ಲಿ ಯೋಜನೆಗಳ ಪ್ರಗತಿ ಆಗುತ್ತಿರುವುದರಿಂದ ವೆಚ್ಚವು ಹೆಚ್ಚಾಗುತ್ತಿದೆ ಎಂದರು.

ಪ್ರಮುಖವಾಗಿ ತುಮಕೂರು-ರಾಯದುರ್ಗ ನಡುವಿನ ರೈಲ್ವೆ ಕಾಮಗಾರಿಗೆ ಯೋಜನಾ ವೆಚ್ಚ 479.59 ಕೋಟಿ ರೂ.ಗಳಿತ್ತು. ಆದರೆ, ಈಗ ಪರಿಷ್ಕøತ ಮೊತ್ತ 2432.51 ಕೋಟಿ ರೂ.ಆಗಿದೆ. ಅದೇ ರೀತಿ, ಮುನಿರಾಬಾದ್-ಮೆಹಬೂಬ್‍ನಗರ(ಗಿಣಿಗೇರ-ರಾಯಚೂರು) ಯೋಜನಾ ವೆಚ್ಚ 1350.91 ಕೋಟಿ ರೂ., ಪರಿಷ್ಕøತ ಮೊತ್ತ 2565.09 ಕೋಟಿ ರೂ., ಕುಡಚಿ-ಬಾಗಲಕೋಟೆ ಯೋಜನಾ ವೆಚ್ಚ 816.14 ಕೋಟಿ ರೂ.ಗಳಿಂದ, 1525 ಕೋಟಿ ರೂ. ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ಯೋಜನಾ ವೆಚ್ಚ 1801 ಕೋಟಿ ರೂ.ಗಳಿಂದ 2161.37 ಕೋಟಿ ರೂ.ಆಗಿದೆ ಎಂದು ಅವರು ಹೇಳಿದರು.

2007ರಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇನ್ನು 15-20 ದಿನಗಳಲ್ಲಿ ನಮ್ಮ ಇಲಾಖೆಯ ಕಾರ್ಯದರ್ಶಿ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಇನ್ನಿತರ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದ ರೈಲ್ವೆ ಕಾಮಗಾರಿಗಳ ಯೋಜನೆ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸೋಮಣ್ಣ ಹೇಳಿದರು.

ಬಿಟ್ ಕಾಯಿನ್ ಗೊತ್ತಿಲ್ಲ, ಬೀಟ್ ಪೊಲೀಸರು ಗೊತ್ತು: ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದು, ಮುಖ್ಯಮಂತ್ರಿ ಸ್ಥಾನವು ಬದಲಾಗಬಹುದು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ಬಿಟ್ ಕಾಯಿನೂ ಗೊತ್ತಿಲ್ಲ. ನನಗೆ ಬೀಟ್ ಪೊಲೀಸರ ಬಗ್ಗೆ ಮಾತ್ರ ಗೊತ್ತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಪಾರದರ್ಶಕವಾಗಿ, ಜನಪರವಾಗಿ ಆಡಳಿತ ನೀಡುತ್ತಿದ್ದಾರೆ. ವಿರೋಧ ಪಕ್ಷದವರು ಅನಗತ್ಯ ಆರೋಪಗಳನ್ನು ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಾರದು ಎಂದು ಸೋಮಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನಿಲ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News