ಬೆಳೆ ಕಟಾವು ಬಳಿಕ ಒತ್ತುವರಿ ತೆರವು: ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ನ.10: ಬಳ್ಳಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸರಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಕರಣ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಒತ್ತುವರಿ ಜಾಗದಲ್ಲಿ ರೈತರು ಬೆಳೆದಿರುವ ಬೆಳೆಯನ್ನು ಕಟಾವು ಮಾಡಿದ ನಂತರವೇ ಒತ್ತುವರಿ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದದೇವನಹಳ್ಳಿಯಲ್ಲಿ ಕೆಲ ರೈತರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಗ್ರಾಮದ ಶಿವಣ್ಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಒತ್ತುವರಿ ಮಾಡಿರುವ 19 ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ಜಾಗವನ್ನು ಸರ್ವೆ ಮಾಡಿರುವ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾದಾಗ ರೈತರು ಇದಕ್ಕೆ ಅಡ್ಡಿಪಡಿಸಿದ್ದಾರೆ. ಜತೆಗೆ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ಹಾಳು ಮಾಡಿದರೆ ಆತ್ಮಹತ್ಯೆಗೆ ಮುಂದಾಗುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಒತ್ತುವರಿ ತೆರವು ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಸಮ್ಮತಿಸಿದ ಪೀಠ, ಸಂಪೂರ್ಣ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಬೇಕು. ಆದರೆ, ರೈತರ ಬೆಳೆ ನಾಶವೂ ಸರಿಕಾಣದು. ಹೀಗಾಗಿ ಒತ್ತುವರಿ ಪ್ರದೇಶದಲ್ಲಿರುವ ಫಸಲನ್ನು ಕಟಾವು ಮಾಡಿದ ಕೂಡಲೇ ಒತ್ತುವರಿ ಸಂಪೂರ್ಣವಾಗಿ ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ರೈತರು ಆ ಜಾಗವನ್ನು ಮತ್ತೆ ಒತ್ತುವರಿ ಮಾಡಿ ಬೆಳೆ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದಿನ ಫೆಬ್ರವರಿ ತಿಂಗಳಿಗೆ ಮುಂದೂಡಿತು.