ಕಂಗನಾ ಎನ್ನುವ ನಟಿಯೂ, ಆಕೆಗೆ ದೊರಕಿದ ಭಿಕ್ಷೆಯೂ...

Update: 2021-11-12 05:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೇಂದ್ರ ಸರಕಾರ ನೀಡಿದ ಪದ್ಮಶ್ರೀ ಎಂಬ ಭಿಕ್ಷೆಗೆ ಪ್ರತಿಯಾಗಿ ಕಂಗನಾ ಎನ್ನುವ ನಟಿ, ಈ ದೇಶಕ್ಕೆ ಸಿಕ್ಕಿದ ಸ್ವಾತಂತ್ರವನ್ನೇ ನಿಂದಿಸಿ, ಭಿಕ್ಷೆ ನೀಡಿದಾತನನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ದೇಶಕ್ಕೆ 1947ರಂದು ದೊರಕಿದ್ದು ಬ್ರಿಟಿಷರ ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿರುವುದು ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ 2014ರಂದು ಎಂಬ ಹೇಳಿಕೆಯ ಮೂಲಕ ಈ ದೇಶದ ಭಿಕ್ಷಕರೂ ಲಜ್ಜೆಯಿಂದ ತಲೆತಗ್ಗಿಸುವಂತೆ ಮಾಡಿದ್ದಾರೆ. ಬೆಳ್ಳಿತೆರೆಯಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಈಕೆ, ನಿಜ ಬದುಕಿನಲ್ಲೂ ರಾಜಕಾರಣಿಗಳೇ ಬೆಕ್ಕಸ ಬೆರಗಾಗುವಂತೆ ನಟಿಸುತ್ತಿದ್ದಾರೆ. ತನ್ನ ಅಕ್ರಮ ಕಟ್ಟಡಗಳು, ತನ್ನ ಮೇಲೆ ನ್ಯಾಯಾಲಯದಲ್ಲಿರುವ ಪ್ರಕರಣಗಳೆಲ್ಲವುಗಳಿಂದ ಪಾರಾಗುವುದಕ್ಕಾಗಿ, ಸರಕಾರವನ್ನು ಓಲೈಸಲು ಈ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನೇ ಅತ್ಯಂತ ಹೀನಾಯವಾಗಿ ನಿಂದಿಸಿರುವ ಕಂಗನಾ ಜಾಗದಲ್ಲಿ ಇನ್ನಾರೇ ಇದ್ದಿದ್ದರೂ ಇಂದು ‘ದೇಶದ್ರೋಹ’ದ ಆರೋಪದಲ್ಲಿ ಜೈಲಲ್ಲಿರಬೇಕಾಗಿತ್ತು. ಆದರೆ ಈ ದೇಶದ ಸ್ವಾತಂತ್ರ ಹೋರಾಟಗಾರರು, ಸ್ವಾತಂತ್ರಾನಂತರ ಈದೇಶವನ್ನು ಕಟ್ಟಿದ ಮಹನೀಯರ ವಿರುದ್ಧ ಕೆಳಮಟ್ಟದಲ್ಲಿ ಮಾತನಾಡುವ ಪೂರ್ಣ ‘ಸ್ವಾತಂತ್ರ್ಯ’ ಕೆಲವರಿಗೆ 2014ರ ಬಳಿಕ ಸಿಕ್ಕಿರುವುದರಿಂದ, ಕಂಗನಾ ಅವರ ಬಂಧನವಾಗಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ 2014ರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ್ತಿಯೆಂದು ಅವರಿಗೆ ಸರಕಾರ ಪಿಂಚಣಿ ದಯಪಾಲಿಸಿದರೂ ಅಚ್ಚರಿಯಿಲ್ಲ.

ನಟಿ ಕಂಗನಾಗೆ ಈ ದೇಶದ ಅತ್ಯುನ್ನತ ಗೌರವವಾಗಿರುವ ಪದ್ಮಶ್ರೀ ದೊರಕಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ನಿಂದಿಸುವ ಅರ್ಹತೆಯನ್ನು ಪದ್ಮಶ್ರೀ ಪ್ರಶಸ್ತಿ ತನಗೆ ನೀಡಿದೆ ಎಂದು ಈಕೆ ಭಾವಿಸಿದಂತಿದೆ. 1947ರ ಸ್ವಾತಂತ್ರ್ಯ ಇಂದು ಸ್ವಾತಂತ್ರ್ಯ ಹೋರಾಟಗಾರರನ್ನು ಭಿಕ್ಷುಕರಿಗೆ ಹೋಲಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಂಗನಾಳಂತಹ ಅವಿವೇಕಿಗಳಿಗೆ ನೀಡಿರುವುದಂತೂ ನಿಜ. ಇದೇ ಮಾತನ್ನು ಈಕೆ ಈ ದೇಶದ ಪ್ರಧಾನಿ, ಗೃಹ ಸಚಿವ ಅಥವಾ ಆರೆಸ್ಸೆಸ್ ಮುಖಂಡರ ವಿರುದ್ಧ ಆಡಿದ್ದಿದ್ದರೆ ಈಕೆಗೆ ಸ್ವಾತಂತ್ರ್ಯ ದೊರಕಿದ ನಿಜವಾದ ಇಸವಿ ಯಾವುದು ಎನ್ನುವುದು ಮನವರಿಕೆಯಾಗಿ ಬಿಡುತ್ತಿತ್ತು. ಯಾಕೆಂದರೆ, ಅವರ ವಿರುದ್ಧ ಹೇಳಿಕೆ ನೀಡಿದ ಮರುದಿನವೇ ಈಕೆಯ ಮೇಲೆ ಸಂಘಪರಿವಾರ ದುಷ್ಕರ್ಮಿಗಳಿಂದ ದಾಳಿಯಾಗುತ್ತಿತ್ತು. ಅಷ್ಟೇ ಅಲ್ಲ, ಈಕೆ ದೇಶದ್ರೋಹದ ಆರೋಪದಲ್ಲಿ ಶಾಶ್ವತವಾಗಿ ಜೈಲು ಪಾಲಾಗುತ್ತಿದ್ದಳು.

ಅನೇಕ ಸಂದರ್ಭದಲ್ಲಿ ಕಂಗನಾ ಸೇರಿದಂತೆ ಆರೆಸ್ಸೆಸ್‌ನ ಹಲವು ಮುಖಂಡರು 1947ರಲ್ಲಿ ನಮಗೆ ದೊರಕಿದ ಸ್ವಾತಂತ್ರ್ಯದ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದಾರೆ. 1947ರಲ್ಲಿ ಈ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ಮತ್ತು ಅಸ್ತಿತ್ವಕ್ಕೆ ಬಂದ ಸಂವಿಧಾನ, ಈ ದೇಶದ ಎಲ್ಲ ಜಾತಿಗಳನ್ನು ಸಮಾನವಾಗಿ ಭಾವಿಸಿತು. ತಳಸ್ತರದ ಜನರನ್ನು ಮೇಲೆತ್ತುವುದಕ್ಕಾಗಿ ಪ್ರಯತ್ನಿಸಿತು. ಆನಂತರ ಬಂದ ನೆಹರೂ, ಇಂದಿರಾರಂತಹ ನಾಯಕರು ಜನಸಾಮಾನ್ಯರಿಗಾಗಿ ಹಲವು ಜನಪರ ಕಾನೂನುಗಳನ್ನು ಜಾರಿಗೆ ತಂದರು. ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶದ ತಳಸ್ತರದ ಜನರು ಬ್ಯಾಂಕ್ ಮೆಟ್ಟಿಲೇರುವಂತಾಯಿತು. ಭೂಮಸೂದೆ ಕಾಯ್ದೆಗಳು ಉಳುವವನಿಗೇ ಭೂಮಿಯನ್ನು ಮರಳಿಸಿದವು. ದಲಿತರು, ಶೋಷಿತರು ಸ್ವಾತಂತ್ರ್ಯಾ ನಂತರ ಮೇಲ್‌ಜಾತಿಗೆ ಸಮನಾಗಿ ತಲೆಯೆತ್ತುವ ಪ್ರಯತ್ನ ನಡೆಸಿದರು. ಮೀಸಲಾತಿ ಅವರ ಪರಿಸ್ಥಿತಿಯನ್ನು ಸಣ್ಣ ಮಟ್ಟಿಗಾದರು ಬದಲಾಯಿಸಿತು.

ಶೋಷಿತ ಸಮುದಾಯ ತಮ್ಮಂತೆಯೇ ಘನತೆಯ ಬದುಕು ನಡೆಸುವುದೇ ಮೇಲ್‌ಜಾತಿಗೆ ಸಹ್ಯವಾದ ವಿಷಯವಲ್ಲ. ರಜಪೂತ ಸಮುದಾಯದಿಂದ ಬಂದಿರುವ ಕಂಗನಾಳಿಗೆ, ಈ ಕಾರಣದಿಂದ 1947ರ ಸ್ವಾತಂತ್ರ ತನ್ನ ಸಮುದಾಯದ ಹಕ್ಕುಗಳನ್ನು ಕಿತ್ತುಕೊಂಡಂತೆ ಭಾಸವಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ 2014ರ ಬಳಿಕ ಸರಕಾರ ಜಾರಿಗೊಳಿಸಿರುವ ಆರ್ಥಿಕ ನೀತಿಗಳು ಮೇಲ್‌ಜಾತಿಗೆ, ಮೇಲ್‌ವರ್ಗಕ್ಕೆ ಪರವಾಗಿರುವಂತಹದು. ಬಡವರನ್ನು ಇನ್ನಷ್ಟು ಬಡವರನ್ನಾಗಿಸುವ, ಶೋಷಿತ ಸಮುದಾಯಕ್ಕೆ ಸಿಕ್ಕ ಮೀಸಲಾತಿಯನ್ನು ಮೇಲ್‌ಜಾತಿಗೂ ನೀಡುವ ಮೂಲಕ ಬಲಾಢ್ಯರನ್ನು ಇನ್ನಷ್ಟು ಬಲಾಢ್ಯರನ್ನಾಗಿಸುವ ಸರಕಾರದ ನೀತಿಗಳು ಕಂಗನಾಳಂತಹ ಮೇಲ್‌ಜಾತಿಯ ಸಮುದಾಯದ ನಟಿಗೆ ನಿಜವಾದ ಸ್ವಾತಂತ್ರ್ಯದಂತೆ ಕಂಡಿರಬಹುದು. ಇಂದು ಆರೆಸ್ಸೆಸ್‌ನೊಳಗಿರುವ ಮೇಲ್‌ಜಾತಿಯ ನಾಯಕರಲ್ಲೂ ಇದೇ ಮನಸ್ಥಿತಿಯಿದೆ. ದೇಶದ ಇತಿಹಾಸದಲ್ಲೇ ಮೊದಲಬಾರಿಗೆ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಮೇಲ್‌ಸ್ತರದಲ್ಲಿರುವ ಸಮುದಾಯಗಳು ಯಾವುದೇ ಪ್ರತಿಭಟನೆ, ಹೋರಾಟಗಳಿಲ್ಲದೆ ‘ಬಡತನ’ದ ಹೆಸರಿನಲ್ಲಿ ಶೇ. 10 ಮೀಸಲಾತಿಯನ್ನು ತನ್ನದಾಗಿಸಿಕೊಂಡವು. 1947ರ ಸ್ವಾತಂತ್ರ್ಯ ಈ ದೇಶದ ಎಲ್ಲ ಜಾತಿ ವರ್ಗಗಳನ್ನು ಸಮಾನವಾಗಿ ಬಗೆದಿದ್ದರೆ 2014ರಲ್ಲಿ ಅಸ್ತಿತ್ವಕ್ಕ್ಕೆ ಬಂದ ಸರಕಾರ ಈ ದೇಶದ ಮೇಲ್‌ಜಾತಿಗಳಿಗೆ ಇನ್ನಷ್ಟು ಅವಕಾಶಗಳನ್ನು ನೀಡುತ್ತಾ ಅವರನ್ನು ತುಷ್ಟೀಕರಣಗೊಳಿಸತೊಡಗಿತು. 1947ರಲ್ಲಿ ಕಳೆದುಕೊಂಡ ಜಾತಿ, ವರ್ಗದ ಹೆಸರಿನಲ್ಲಿ ಶೋಷಣೆ ನಡೆಸುವ ಹಕ್ಕು ಇವರಿಗೆ 2014ರ ಬಳಿಕ ಮತ್ತೆ ದೊರಕುತ್ತಿದೆ. ಆದುದರಿಂದಲೇ, ಇವರ ಪಾಲಿಗೆ ಇದುವೇ ನಿಜವಾದ ಸ್ವಾತಂತ್ರ್ಯವಾಗಿದೆ.

2014ರಿಂದ ಸರಕಾರ ಜಾರಿಗೆ ತರುತ್ತಿರುವ ನೀತಿಗಳಿಂದಾಗಿ ಸಾರ್ವಜನಿಕ ಸೊತ್ತುಗಳೆಲ್ಲ ಬೃಹತ್ ಖಾಸಗಿ ಕಂಪೆನಿಗಳ ವಶವಾಗುತ್ತಿವೆ. ಕಳೆದ 70 ವರ್ಷಗಳಲ್ಲಿ ಕಟ್ಟಿ ಬೆಳೆಸಿದ ಬಹುತೇಕ ಸಾರ್ವಜನಿಕ ಸಂಸ್ಥೆಗಳು ಖಾಸಗಿ ತೆಕ್ಕೆಗಳಿಗೆ ಹಸ್ತಾಂತರವಾಗಿವೆ. ದೇಶದ ಚುಕ್ಕಾಣಿ ಕಾರ್ಪೊರೇಟ್ ವಲಯದ ಕೈಗೆ ಮತ್ತು ಆರೆಸ್ಸೆಸ್ ಕೈಗೆ ಹಸ್ತಾಂತರವಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವೇ ಇದ್ದಿರಲಿಲ್ಲ. ಮಾತ್ರವಲ್ಲ, ಸ್ವಾತಂತ್ರ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ಗಾಂಧೀಜಿಯನ್ನು ಕೊಂದ ಕಳಂಕವನ್ನು ಅದು ತನ್ನದಾಗಿಸಿ ಕೊಂಡಿದೆ. ಸ್ವಾತಂತ್ರ್ಯ ದೊರಕಿದ ಬಳಿಕವೂ ಅದು ತನ್ನ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ. ಆರೆಸ್ಸೆಸ್ ಮನುವಾದದ ಮೇಲೆ ಅಪಾರ ನಂಬಿಕೆಯನ್ನಿಟ್ಟಿದೆ. ಬ್ರಿಟಿಷರು ಈ ದೇಶವನ್ನು ರಾಜಕೀಯವಾಗಿ ಪಾರತಂತ್ರಗೊಳಿಸಿದ್ದರೆ, ಮನುವಾದ ಈ ದೇಶದೊಳಗಿರುವ ಜನರ ಸಾಮಾಜಿಕ ಹಕ್ಕುಗಳನ್ನೇ ಕಿತ್ತುಕೊಂಡಿತ್ತು. ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲೇ, ಈ ದೇಶದೊಳಗಿರುವ ತಳಸ್ತರದ ಜನರಿಗೆ ಕೆರೆ, ಬಾವಿಯ ನೀರನ್ನು ಮುಟ್ಟುವ ಹಕ್ಕಿರಲಿಲ್ಲ. ಶಿಕ್ಷಣದ ಹಕ್ಕಿರಲಿಲ್ಲ. ಅವೆಲ್ಲವೂ ಹಂತ ಹಂತವಾಗಿ ದೊರಕಿದ್ದು ಬ್ರಿಟಿಷರ ಆಗಮನದ ಬಳಿಕ. ಸ್ವಾತಂತ್ರಾನಂತರ ಶಿಕ್ಷಣ ಸರ್ವರ ಹಕ್ಕಾಗಿ ಘೋಷಿಸಲ್ಪಟ್ಟಿತು. ಈ ಎಲ್ಲ ಕಾರಣಗಳಿಂದ ಆರೆಸ್ಸೆಸ್ ನಾಯಕರಿಗೆ, ಅವರು ಪ್ರತಿನಿಧಿಸುವ ಸಮುದಾಯಕ್ಕೆ 1947ರ ಸ್ವಾತಂತ್ರ್ಯದ ಮೇಲೆ ಅಸಹನೆ ಸಹಜ. ಅವರೆಲ್ಲರ ಪಾಲಿಗೆ 2014ರ ಬಳಿಕದ ದಿನಗಳೇ ಹಿತವಾಗಿ ಕಾಣುತ್ತಿದೆ. ಆದುದರಿಂದ, ಕಂಗನಾ ಹೇಳಿಕೆ ಆಕೆಯ ಅಪ್ರಬುದ್ಧತೆಯ ಪ್ರದರ್ಶನವೆಂದು ನಾವು ನಿರ್ಲಕ್ಷಿಸುವಂತಿಲ್ಲ. ಅದು ಆಕೆಯ ಅಂತರಾಳದ ಅಭಿವ್ಯಕ್ತಿಯೂ ಹೌದು. ನಿಜಕ್ಕೂ ನಮ್ಮ ಸರಕಾರ 1947ರ ಸ್ವಾತಂತ್ರ್ಯವನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುತ್ತದೆಯಾದರೆ ತಕ್ಷಣ ಕಂಗನಾ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಬೇಕು. ಆಕೆಗೆ ನೀಡಿದ ಪದ್ಮಶ್ರೀಯನ್ನು ಕಿತ್ತುಕೊಳ್ಳಬೇಕು. ಕಂಗನಾ ಕಾರಣದಿಂದಾಗಿ ಪದ್ಮಶ್ರೀ ಪ್ರಶಸ್ತಿಯ ಕುರಿತಂತೆ ಸಾಧಕರು ಮುಜುಗರ ಪಡುವಂತಹ ಸ್ಥಿತಿ ನಿರ್ಮಾಣವಾಗದಂತೆ ಸರಕಾರ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News